ಸಿರಿಗನ್ನಡ ಮಿತ್ರತಂಡದ ದಶಮಾನೋತ್ಸವ; ವಾಗ್ದೇವಿ ಕೃತಿ ಬಿಡುಗಡೆ

sirigannada
Published on

ಬೆಂಗಳೂರು: ಜಗತ್ತಿನಲ್ಲಿ ಅತಿಹೆಚ್ಚು ಜನ ಬಳಸುವ ಭಾಷೆಗಳಲ್ಲಿ ಕನ್ನಡವು ಒಂದಾಗಿದ್ದು, ಅಧ್ಯಯನವೊಂದರ ಪ್ರಕಾರ 45 ದಶಲಕ್ಷ ಜನ ಕನ್ನಡವನ್ನು ಬಳಸುತ್ತಾರೆ ಎಂದು ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ಹೇಳಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ನಡೆದ ಸಿರಿಗನ್ನಡ ಮಿತ್ರ ತಂಡದ ದಶಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಜಗತ್ತಿನಲ್ಲಿ ಕನ್ನಡ 21ನೇ ಪ್ರಮುಖ ಭಾಷೆಯಾಗಿದೆ. ಜೀವಂತ ಭಾಷೆಯಾಗಿರುವ ಕನ್ನಡವು ಪ್ರದೇಶವಾರು ವಿಶಿಷ್ಟ ಸ್ವರೂಪವನ್ನು ಹೊಂದಿದೆ. ಕರ್ನಾಟಕದಲ್ಲಿ ಪ್ರತಿ 10-20 ಕಿ.ಮೀ. ನಡುವೆ ಭಾಷೆಯ ಸ್ವರೂಪದಲ್ಲಿ ಬದಲಾವಣೆ ಕಾಣಬಹುದು. ವಿನೋಬಾ ಭಾವೆಯವರು ಕನ್ನಡವನ್ನು ಲಿಪಿಗಳ ರಾಣಿ ಎಂದು ಬಣ್ಣಿಸಿದ್ದಾರೆ. ಸುದೀರ್ಘ ಇತಿಹಾಸ ಇರುವ ಕನ್ನಡಕ್ಕೆ ಶಾಸೀಯ ಸ್ಥಾನಮಾನ ದೊರಕಿದೆಯಾದರೂ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಸಂಘಟನೆಗಳು ಒತ್ತಡ ಹೇರಬೇಕು. ಈಗಾಗಲೇ ರಾಜ್ಯದಲ್ಲಿ ತ್ರಿಭಾಷಾ ಸೂತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ಸಿಬಿಎಸ್ಸಿ, ಐಸಿಎಸ್ಸಿ ಶಾಲೆಗಳಲ್ಲೂ ಕೂಡಾ ಕನ್ನಡ ಕಲಿಸುವ ಬಗ್ಗೆ ಸರ್ಕಾರದ ಆದೇಶವಿದ್ದರೂ ಅನುಷ್ಠಾನಕ್ಕೆ ಬಂದಿಲ್ಲ. ಆ ಬಗ್ಗೆ ಕೂಡಾ ಸೂಕ್ತ ಕ್ರಮ ಅಗತ್ಯವಿದೆ. ಕುವೆಂಪುರವರು ಹೇಳುವ ಹಾಗೆ ಸರ್ವಜನಾಂಗದ ಶಾಂತಿಯ ತೋಟವಾಗಿರುವ ಕರ್ನಾಟಕದಲ್ಲಿ ಜಾನಪದ, ಕಲೆ, ಸಾಹಿತ್ಯ, ಶಿಲ್ಪಕಲೆ ಸಮೃದ್ಧವಾಗಿದ್ದು ಇದನ್ನು ಉಳಿಸಿ ಬೆಳೆಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಿರಿಗನ್ನಡ ಮಿತ್ರ ತಂಡದ ಸದಸ್ಯರು ಇಳಿವಯಸ್ಸಿನಲ್ಲೂ ಆಸಕ್ತಿಯಿಂದ ಕೆಲಸ ಮಾಡುತ್ತಿರುವುದು ಯುವ ಜನಾಂಗಕ್ಕೆ ಮಾದರಿ ಎಂದು ರುದ್ರಣ್ಣ ವಿವರಿಸಿದರು.

ಸಮಾರಂಭದಲ್ಲಿ ದಶಮಾನೋತ್ಸವದ ಸವಿನೆನಪಿಗಾಗಿ ವಾಗ್ದೇವಿ ಕೃತಿಯನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಹರಿಕತೆ ವಿದ್ವಾನ್ ಡಾ.ಲಕ್ಷ್ಮಣದಾಸ್ ಬಿಡುಗಡೆ ಮಾಡಿದರು. ವಾಣಿಜ್ಯೋದ್ಯಮಿ ಎಂ.ಎನ್.ವೆಂಕಟೇಶ್, ಪತ್ರಕರ್ತ ವೆಂಕಟೇಶ್ ಆರ್.ದಾಸ್, ಹಿರಿಯ ಸಾಹಿತಿ ರು.ಬಸಪ್ಪ, ತಂಡದ ಅಧ್ಯಕ್ಷ ಡಬ್ಲ್ಯೂ.ಕೆ.ವೆಂಕಟೇಶಮೂರ್ತಿ, ಕಾರ್ಯದರ್ಶಿ ಕೌಡ್ಲೆ ನಾರಾಯಣಶೆಟ್ಟಿ, ಬಿ.ಎಲ್.ಶ್ರೀನಿವಾಸ್, ಎನ್.ವಿ.ಸುಬ್ಬಣ್ಣ, ಕೆ.ರಮೇಶ್ ಜಮದಗ್ನಿ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡದ ಇತಿಹಾಸವನ್ನು ಶ್ರೀಮಂತಗೊಳಿಸುವಲ್ಲಿ ಸಾಹಿತ್ಯ,ಸಂಗೀತ, ನೃತ್ಯ, ರಂಗಭೂಮಿ ಎಲ್ಲವನ್ನೂ ಒಳಗೊಂಡಿರುವ ಕಥಾಕೀರ್ತನದ ಕೊಡುಗೆ ಪ್ರಮುಖವಾಗಿದೆ. ಆದರೆ ಹರಿಕತೆ ಕಲೆಯು ನೇಪತ್ಯಕ್ಕೆ ಸರಿಯುತ್ತಿದ್ದು, ಇದನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರ ಸಂಗೀತ ಮತ್ತು ನೃತ್ಯ ಅಕಾಡೆಮಿ ಮೂಲಕ ಶಾಲೆಗಳಲ್ಲಿ ಹರಿಕತೆ ಆಯೋಜಿಸಲು ಕ್ರಮ ಕೈಗೊಳ್ಳಬೇಕು.

-ಡಾ.ಲಕ್ಷ್ಮಣದಾಸ್, ಹಿರಿಯ ಹರಿಕತೆ ವಿದ್ವಾನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net