ಕರೊನಾ ಫೋಬಿಯಾದಿಂದ ಹೊರ ಬನ್ನಿ, ಮನೋವೈದ್ಯ ಡಾ.ಪಿ.ವಿ ಭಂಡಾರಿ ಸಲಹೆ

bhandary
Published on

- ಅವಿನ್ ಶೆಟ್ಟಿ, ಉಡುಪಿ

ಜಾಗತಿಕ ಮಟ್ಟದಲ್ಲಿ ಕರೊನಾ ವೈರಸ್‌ನಿಂದ ಶೇ.99 ಮಂದಿ ಗುಣವಾಗಿದ್ದಾರೆ. ಮರಣ ಪ್ರಮಾಣ ಶೇ.1ಮಾತ್ರ. ಕಾಯಿಲೆ ಬಗ್ಗೆ ಎಷ್ಟೇ ಜಾಗೃತಿ ಮೂಡುತ್ತಿದ್ದರೂ, ಸಕಾರಾತ್ಮಕ ವಿಚಾರಗಳನ್ನು ಜನರು ಹೆಚ್ಚಾಗಿ ಪರಿಗಣಿಸುತ್ತಿಲ್ಲ. ಪ್ರತಿ ದಿನ ಬರುತ್ತಿರುವ ಕೋವಿಡ್ ಮಾದರಿ ಪರೀಕ್ಷೆಯ ನೆಗೆಟಿವ್ ವರದಿಗಳು ಸಾಮಾನ್ಯ ಜನರ ಗಮನಕ್ಕೆ ಬರುತ್ತಿಲ್ಲ. ಇದನ್ನು ಜನರು ಗಮನಿಸಬೇಕು.

ಕರೊನಾ ಫೋಬಿಯಾ: ಸಾಕಷ್ಟು ಮಂದಿ ಕರೊನಾ ಫೋಬಿಯ (ಭಯ)ದಿಂದ ನರಳುತ್ತಿದ್ದಾರೆ. ಎಲ್ಲ ಬಗೆಯ ಇನ್‌ಫಾರ್‌ಮೇಶನ್ ಓವರ್‌ಲೋಡ್‌ನಿಂದಾಗಿ ಕರೊನಾ ಫೋಬಿಯಾಕ್ಕೆ ಜನರು ತುತ್ತಾಗುತ್ತಿದ್ದಾರೆ. ಇದೂ ಕರೊನಾಗಿಂತಲೂ ಡೇಂಜರ್.

ಕರೊನಾ ಫೋಬಿಯಾ ಎಂದರೆ...ಯಾವಾಗಲೂ ಕರೊನಾ, ಕರೊನಾ ಎಂದು ಚಿಂತಿಸುವುದು, ಕರೊನಾ ಬರುತ್ತೆ ಎಂಬ ಭಯದಲ್ಲೇ ಇರುವುದು. ಗೂಗಲ್, ಫೇಸ್ಬುಕ್, ಯುಟ್ಯೂಬ್, ಟಿವಿಗಳಲ್ಲಿ ಸದಾ ಕರೊನಾ ಸಂಬಂಧಿತ ವಿಚಾರಗಳನ್ನೇ ವೀಕ್ಷಿಸುವುದು. ಮನೆಯಲ್ಲಿ, ಗೆಳೆಯರಲ್ಲಿ ಯಾವಾಗಲೂ ಈ ಬಗ್ಗೆಯೇ ಚರ್ಚಿಸುವುದು, ವೈದ್ಯರಿಗೆ ಪದೇಪದೆ ಕರೆ ಮಾಡಿ ಈ ವಿಷಯದಲ್ಲಿ ಮಾತನಾಡುವುದು. ಕೆಲಸ ಮಾಡುವ ಸ್ಥಳದಲ್ಲಿ ವಿಪರೀತ ಆತಂಕದ ವಾತಾವರಣ ಇರುವುದು, ಮೊದಲು ಈ ಫೋಬಿಯಾದಿಂದ ಜನ ಸಮೂಹ ಹೊರಬರಬೇಕು. ಆಗ ಎಲ್ಲವೂ ಸರಿದಾರಿಗೆ ಬರುತ್ತದೆ.

ರೋಗ ನಿರೋಧಕ ಶಕ್ತಿ: ಇಂಥ ವಿಚಾರಗಳಲ್ಲಿ ಸಕಾರತ್ಮಾಕ ಮನೋಭಾವ ಬೆಳೆಸಿಕೊಳ್ಳದೇ ಇದ್ದಲ್ಲಿ ದೇಹದ ರೋಗ ನಿರೋಧಕ ಶಕ್ತಿ ಕುಂದುತ್ತದೆ ಎಂದು ಮನಶಾಸ್ತ್ರದ ಅಧ್ಯಯನ ಹೇಳುತ್ತದೆ. ಸೈಕೊ ನ್ಯೂರೊ ಇಮುನ್ಯೋ ಎಂಡೋ ಕ್ರೈನಾಲಜಿ ಶಾಸ್ತ್ರದಲ್ಲಿ ಇದರ ಉಲ್ಲೇಖವಿದೆ. ನಾವು ಗಾಢವಾಗಿ ಯೋಚನೆ ಮಾಡುವ ಸಂಗತಿಗಳು ನರಕೋಶಗಳ ಮೇಲೆ ಮತ್ತು ಎಂಡೋಕ್ರೈನ್ (ಹಾರ್ಮೋನ್) ರಸದೂತಗಳ ನಿಯಂತ್ರಣದ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.

ಚಿಂತೆ ಬಿಟ್ಟು ಹಿಂದಿನಂತೆ ಕಾಲ ಕಳೆಯಿರಿ: ಜನರು ಕರೊನಾ ವಿಚಾರ ಬಿಟ್ಟು ಹೊರಬರಬೇಕು. ಈ ಹಿಂದಿನಂತೆ ಸಮಯ ಕಳೆಯಬೇಕು. ದಿನಕ್ಕೆ ಒಂದು ಗಂಟೆ ವಾಕಿಂಗ್, ಸೈಕ್ಲಿಂಗ್, ವ್ಯಾಯಾಮ, ಉತ್ತಮ ಸಿನೆಮಾ ವೀಕ್ಷಣೆ, ಸಾಹಿತ್ಯ, ಕಲೆ, ಆಧ್ಯಾತ್ಮಿಕ ಪುಸ್ತಕಗಳನ್ನು ಓದಬೇಕು. ಅಡುಗೆ ತಯಾರಿ, ಕುಟುಂಬದ ಜತೆ ಹರಟೆ, ಒಂದಿಷ್ಟು ಗೆಳೆಯರ ಜತೆ ಸೋಶಿಯಲ್ ಮೀಡಿಯ ಚಾಟ್ ಮಾಡಬೇಕು. ಇಂತಹ ಸಕಾರಾತ್ಮಕ ವಿಚಾರಗಳು, ಕರೊನಾ ಫೋಬಿಯಾದಿಂದ ನಮ್ಮನ್ನು ದೂರವಾಗಿಸುತ್ತದೆ.

ಕರೊನಾ ಬಗ್ಗೆ ಭಯ ಬೇಡ, ಚಿಂತಿಸಬೇಡಿ ಎಂದ ಕೂಡಲೇ ಆರೋಗ್ಯವನ್ನು ಸಂಪೂರ್ಣ ನಿರ್ಲಕ್ಷಿಸಬೇಕು ಎಂದರ್ಥವಲ್ಲ. ಕರೊನಾ ವೇಗವಾಗಿ ಹರಡುವ ವೈರಸ್. ಆದರೆ, ಅದು ಮಾರಣಾಂತಿಕ ಕಾಯಿಲೆಯಲ್ಲ. ದೈಹಿಕ ಅಂತರ, ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಿದರೆ ವೈರಾಣುವನ್ನು ದೂರವಿಡಬಹುದು. - ಡಾ.ಪಿ.ವಿ ಭಂಡಾರಿ, ಹಿರಿಯ ಮನೋವೈದ್ಯ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net