ತೆಂಕನಿಡಿಯೂರು ಗ್ರಾಪಂನಲ್ಲಿ ಬಾವಿನೀರು ಸರಬರಾಜು

udp-tenkanidiyur
Published on

ಉಡುಪಿ: ತೆಂಕನಿಡಿಯೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆಗಳಿಗೆ ಮಳೆಗಾಲದಲ್ಲಿ ಬಾವಿ ನೀರು ಸರಬರಾಜು ಮಾಡಲಾಗುತ್ತಿದ್ದು, ಬೋರವೆಲ್​ ನೀರು ಬಂದ್​ ಮಾಡಲಾಗಿದೆ ಎಂದು ಗ್ರಾ.ಪಂ ಅಧ್ಯಕ್ಷೆ ಶೋಭಾ.ಡಿ.ನಾಯ್ಕ್​ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೆಡಿಕಲ್​ ಗೋಡನ್​ ನಿರ್ಮಾಣ ಸಂದರ್ಭದಲ್ಲಿ ತೋಡು ಮುಚ್ಚಿದ್ದರಿಂದ ಕೆಸರು ನೀರು ನಿಂತು ಸುತ್ತಮುತ್ತಲಿನ ಬಾವಿ ನೀರು ಹಾಳಾಗಿದೆ. ಇತ್ತೀಚೆಗೆ ಜೆಸಿಬಿ ಮೂಲಕ ತೋಡು ದುರಸ್ತಿಗೊಳಿಸಲಾಗಿದೆ. ಎಸ್​.ಎಲ್​.ಆರ್​.ಎಂ ಘಟಕ ಸಮೀಪ ಹೊಂಡದಲ್ಲಿ ಕಸ ಹೂತು ಹಾಕಿರುವುದಕ್ಕೂ ನೀರು ಕಲುಷಿತಗೊಂಡಿರುವುದಕ್ಕೂ ಸಂಬಂಧವಿಲ್ಲ ಎಂದು ತಿಳಿಸಿದರು.

2015 ರಿಂದ ತೆಂಕನಿಡಿಯೂರಿನಲ್ಲಿ ಬಿಜೆಪಿ ಬೆಂಬಲಿತ ಆಡಳಿತವಿದ್ದು, 2019 ರಲ್ಲಿ ಕೆಳಾರ್ಕಳಬೆಟ್ಟು ವಾರ್ಡ್​ನಲ್ಲಿ ಕಾಂಗ್ರೆಸ್​ ಬೆಂಬಲಿತ ಸದಸ್ಯರ, ಸ್ಥಳಿಯ ಗ್ರಾಮಸ್ಥರ ವಿರೋಧದ ನಡುವೆಯೇ ತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಎಸ್​.ಎಲ್​.ಆರ್​.ಎಂ ಘಟಕವನ್ನು ಬೋರ್​ ವೆಲ್​ ಪಕ್ಕದಲ್ಲಿಯೇ ನಿಮಾರ್ಣ ಮಾಡಲಾಗಿತ್ತು. 2019 ರಿಂದ 2024ರ ಜುಲೈ 2 ರ ತನಕ ಎಸ್​.ಎಲ್​.ಆರ್​.ಎಂ ಘಟಕದಲ್ಲಿ ಉಳಿದ ತ್ಯಾಜ್ಯವನ್ನು ವಿಲೇವಾರಿ ಮಾಡದೆ ಬಿಜೆಪಿ ಬೆಂಬಲಿತ ಸದಸ್ಯರು ಕಾಲಹರಣ ಮಾಡಿದ್ದಾರೆ ಎಂದು ಆರೋಪಿಸಿದರು.

ಬೋರ್​ ವೆಲ್​ ಇರುವ ಸ್ಥಳದ ಪಕ್ಕದಲ್ಲಿಯೇ ಎಸ್​.ಎಲ್​.ಆರ್​.ಎಮ್​ ಘಟಕ ನಿಮಾರ್ಣ ಮಾಡಿರುವುದರಿಂದ ಅಲ್ಲಿನ ನೀರು ಕಲುಷಿತಗೊಂಡಿದ್ದು ಕುಡಿಯಲು ಸಾಧ್ಯವಾಗದೆ ಜನರು ಬವಣೆ ಪಡುವಂತೆ ಮಾಡಿರುವುದು ಬಿಜೆಪಿಗರು. ಇವರ ಕಿರುಕುಳದಿಂದ ಬೇಸತ್ತು ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿರುವುದರಿಂದ ನನ್ನ ವಿರುದ್ಧ ಅನಾವಶ್ಯಕ ಆರೋಪ ಮಾಡುತ್ತಿದ್ದಾರೆ. ಜಾತಿ ನಿಂದನೆ ಬಗ್ಗೆ ಈಗಾಗಲೇ ಮಲ್ಪೆ ಠಾಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ ಇತರರ ವಿರುದ್ದ ಪ್ರಕರಣ ದಾಖಲಿಸಿದ್ದೇನೆ ಎಂದರು. ಸುದ್ದಿಗೋಷ್ಠಿಯಲ್ಲಿ ತೆಂಕನಿಡಿಯೂರು ಗ್ರಾ.ಪಂ ಸದಸ್ಯರಾದ ಪ್ರಖ್ಯಾತ್​ ಶೆಟ್ಟಿ, ಸುರೇಶ್​ ನಾಯ್ಕ್​, ಸತೀಶ್​ ನಾಯ್ಕ್​, ವೆಂಕಟೇಶ್​ ಕುಲಾಲ್​, ರವಿರಾಜ್​, ಶರತ್​ ಶೆಟ್ಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net