ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವುದು ಅತೀ ಅಗತ್ಯ

udp-25-tenkanidiyuru
Published on

ಉಡುಪಿ: ಇಂದಿನ ಯುವ ಜನತೆಗೆ ಬೇರೆ ಬೇರೆ ಒತ್ತಡಗಳನ್ನು ಎದುರಿಸುತ್ತಿದ್ದು, ಯಾವುದೇ ರೀತಿಯಲ್ಲಿ ವಿಚಲಿತರಾಗದೇ ಅಧ್ಯಯನದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಉತ್ತಮ ಸಾಧನೆಗಳೊಂದಿಗೆ ಭವಿಷ್ಯ ರೂಪಿಸಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗದೇ ಹೆತ್ತವರಿಗೆ ಆಸರೆಯಾಗಬೇಕು. ಸಮಾಜದಲ್ಲಿ ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ನಾಗರಿಕರಾಗಿ ಬೆಳೆಯಬೇಕೆಂದು ಮನೋರೋಗ ತಜ್ಞ ಡಾ. ಪಿ.ವಿ. ಭಂಡಾರಿ ಹೇಳಿದರು.

ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ದಲ್ಲಿ ಪ್ರಥಮ ಬಿ.ಎ., ಬಿ.ಸಿ.ಎ. ಹಾಗೂ ಬಿ.ಎಸ್ಸಿ.ಗೆ ಪ್ರಥಮ ಪದವಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಮತ್ತು ಪಾಲಕರ ಅಭಿವಿನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲವ್ಯಕ್ತಿಯಾಗಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಸುರೇಶ್​ ರೈ ಕೆ., ಉನ್ನತ ಶಿಕ್ಷಣ ಪಡೆಯುವ ಅವಕಾಶ ಲಭಿಸಿದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಸೌಲಭ್ಯಗಳನ್ನು ಸಂಪೂರ್ಣ ಸದುಪಯೋಗಪಡಿಸಿ ಕೊಳ್ಳಬೇಕು ಎಂದರು.

ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರಶಾಂತ ನೀಲಾವರ, ಪದವಿ ಶಿಕ್ಷಣದಲ್ಲಿ ಪರೀಕ್ಷಾ ವ್ಯವಸ್ಥೆ, ವಿವಿಧ ಕೋರ್ಸುಗಳು, ಹಾಜರಾತಿ ಹಾಗೂ ಕಾಲೇಜಿನಲ್ಲಿರುವ ಅವಕಾಶಗಳು, ಸಹಪಠ್ಯ ಚಟುವಟಿಕೆಗಳ ಕುರಿತಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಲಯನ್ಸ್​ ಅಮೃತ್​ನ ಅಧ್ಯಕ್ಷ ಲಯನೆಸ್​ ಭಾರತಿ ಎಚ್​.ಎಸ್​., ಗಣಕ ವಿಜ್ಞಾನ ವಿಭಾಗ ಮುಖ್ಯಸ್ಥ ರಾಜ್​ ಕುಮಾರ್​, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಮಮತಾ ಎ.ಎಲ್​., ಅಂಗ್ಲ ವಿಭಾಗ ಮುಖ್ಯಸ್ಥ ನಿತ್ಯಾನಂದ ವಿ. ಗಾಂವಕರ್​ ಉಪಸ್ಥಿತರಿದ್ದರು. ಕಾಲೇಜಿನ ಶೈಕ್ಷಣಿಕ ಸಲಹೆಗಾರ ಡಾ. ಪ್ರಸಾದ್​ ರಾವ್​ ಎಂ. ಸ್ವಾಗತಿಸಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಗಣಕ ವಿಜ್ಞಾನ ಸಹಾಯಕ ಪ್ರಾಧ್ಯಾಪಕ ಪ್ರಸಾದ್​ ಎಂ.ಎಚ್​. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net