

ಕಾಸರಗೋಡು: ಕಲೆಗೆ ನೀಡುವ ನಿಸ್ವಾರ್ಥ ಸೇವೆ ಮಹತ್ತರವಾದ ಸಾಧನೆಗೆ ಹಾದಿ ಮಾಡಿಕೊಡುವುದಾಗಿ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ತಿಳಿಸಿದರು.
ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದಲ್ಲಿ ನೂತನವಾಗಿ ಆರಂಭಿಸಲಾಗಿರುವ ’ತೆಂಕಬೈಲು ಸ್ಮತಿ ಭವನ’ಲೋಕಾರ್ಪಣೆ ಮಾಡಿ ಆಶೀರ್ವಚನ ನೀಡಿದರು.
ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಟಿ.ಶ್ಯಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ತೆಂಕುತಿಟ್ಟು ಯಕ್ಷಗಾನ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮೂಲ ಶಿಕ್ಷಣಕ್ಕೆ ಆದ್ಯತೆ ನೀಡದಿದ್ದರೆ ಭದ್ರ ಬುನಾದಿಯಿಂದ ಕೂಡಿದ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಪರಂಪರೆಯ ಯಕ್ಷಗಾನಕ್ಕೆ ನೇತೃತ್ವ ನೀಡುವಲ್ಲಿ ಪೆರ್ಲದ ಕೇಂದ್ರ ಮುಂಚೂಣಿಯಲ್ಲಿರುವುದಾಗಿ ತಿಳಿಸಿದರು.
ಹಿರಿಯ ವಕೀಲ ಎಂ.ನಾರಾಯಣ ಭಟ್, ಶ್ರೀ ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಬೈರಿಕಟ್ಟೆ ಶ್ರೀಭದ್ರಕಾಳಿ ಕೊರಗಜ್ಜ ಸಾನ್ನಿಧ್ಯದ ಅಶೋಕ್ ಪಂಡಿತ್, ಕೇಂದ್ರದ ಭಾಗವತಿಕೆ ಗುರು ತೆಂಕಬೈಲು ಮುರಳೀಕೃಷ್ಣ ಶಾಸ್ತ್ರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕೇಂದ್ರದ ಸಂಚಾಲಕ ಹಾಗೂ ನಾಟ್ಯಗುರು ಸಬ್ಬಣಕೋಡಿ ರಾಮ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕೇಂದ್ರದ ಗೌರವಾಧ್ಯಕ್ಷ ಎನ್.ಕೆ.ರಾಮಚಂದ್ರ ಭಟ್ ಪನೆಯಾಲು ನಿರೂಪಿಸಿದರು. ಪೂರ್ವರಂಗ, ಕೇಂದ್ರದ ವಿದ್ಯಾರ್ಥಿಗಳಿಂದ ಯಕ್ಷಗಾನ ಬಯಲಾಟ ನಡೆಯಿತು.
ಮೇಳಗಳಿಗೆ ಪ್ರಬುದ್ಧ ಕಲಾವಿದರನ್ನು ಪೂರೈಸುವುದು ಇಂದು ಸವಾಲಾಗಿ ಪರಿಣಮಿಸುತ್ತಿದೆ. ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿಸಿಕೊಡುವ ಕೇಂದ್ರಗಳಿಂದ ಹೊರಬರುವ ಕಲಾವಿದರಿಗೆ ಎಲ್ಲ ಕಡೆ ಮನ್ನಣೆ ಲಭಿಸುತ್ತದೆ. ಪೆರ್ಲದ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಕಲಾವಿದರಿಗೆ ಎಂದಿಗೂ ಈ ವಿಶೇಷ ಗೌರವ ಪ್ರಾಪ್ತಿಯಾಗುತ್ತಿದೆ. ಕೇಂದ್ರದ ಸುಸಜ್ಜಿತ ಸಭಾಂಗಣ ನಿರ್ಮಾಣದ ಕನಸು ಶೀಘ್ರ ನನಸಾಗಲಿ. ಡಾ.ಟಿ.ಶ್ಯಾಮ ಭಟ್, ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ