ಒಂದೇ ದಿನ ಎಲ್ಲ ಹಬ್ಬ ಆಚರಿಸಿದ ಮಕ್ಕಳು!

Untitled design (3)
Published on

ಕುಷ್ಟಗಿ: ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿ ಇಡೀ ರಾತ್ರಿ ಸಂಭ್ರಮಿಸುವುದು ಬಹುತೇಕ ಶಾಲೆಗಳ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗುತ್ತಿದೆ. ಇಲ್ಲೊಂದು ಸರ್ಕಾರಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅಲ್ಲಿನ ಶಿಕ್ಷಕರು ಹಬ್ಬಗಳ ವೈಶಿಷ್ಟ್ಯ ಕುರಿತು ಮಕ್ಕಳಿಗೆ ತಿಳಿ ಹೇಳುವ ಮೂಲಕ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದ್ದಾರೆ.

ಮಕ್ಕಳನ್ನು ಆಕರ್ಷಿಸುವ ವಾತಾವರಣವಿರುವ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿರುವ ತಾಲೂಕಿನ ಟೆಂಗುಂಟಿ ಗ್ರಾಮದ ಉನ್ನತೀಕರಿಸಿದ ಸಹಿಪ್ರಾ ಶಾಲೆಯಲ್ಲಿ ಶುಕ್ರವಾರ ಇಂಥದ್ದೊಂದು ಕಾರ್ಯಕ್ರಮ ನಡೆದಿದೆ. ಭಾರತದಲ್ಲಿ ಆಚರಿಸಲಾಗುವ ಯುಗಾದಿ, ಸಂಕ್ರಾಂತಿ, ನಾಗರ ಪಂಚಮಿ, ಗಣೇಶ ಚತುರ್ಥಿ, ಎಳ್ಳು ಅಮಾವಾಸ್ಯೆ, ದೀಪಾವಳಿ, ದಸರಾ ಸೇರಿದಂತೆ ರಂಜಾನ್, ಮೊಹರಂ, ಕ್ರಿಸ್ಮಸ್ ಹಬ್ಬಗಳನ್ನು ಪ್ರಾಯೋಗಿಕವಾಗಿ ಆಚರಿಸುವ ಮೂಲಕ ಮಕ್ಕಳು ಹಬ್ಬಗಳ ಹಿನ್ನೆಲೆ ಹಾಗೂ ವೈಶಿಷ್ಯ ಕುರಿತು ತಿಳಿದುಕೊಂಡರು.

ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ ಮಕ್ಕಳೊಟ್ಟಿಗೆ ಶಿಕ್ಷಕರು ಹಾಗೂ ಗ್ರಾಮಸ್ಥರೂ ಜತೆಗೂಡಿದ್ದು ವಿಶೇಷವಾಗಿತ್ತು. ನಾಗದೇವತೆಗೆ ಹಾಲೆರೆಯುವುದು, ಪರಸ್ಪರ ಬೇವು ಬೆಲ್ಲ ಹಂಚುವುದು, ಶಾಲೆಯ ಕೈತೋಟದಲ್ಲಿ ಚರಗಾ ಚೆಲ್ಲಿದರು. ಗ್ರಾಮೀಣ ಭಾಗದಲ್ಲಿ ಹಿಂದುಗಳೇ ಹೆಚ್ಚಾಗಿ ಆಚರಿಸಲಾಗುವ ಮೊಹರಂ ಹಬ್ಬದ ಸಂದರ್ಭವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಕುಣಿತ ಪ್ರದರ್ಶಿಸುವ ಮೂಲಕ ಗ್ರಾಮಸ್ಥರು ಗಮನ ಸೆಳೆಯಿತು.

ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಶಿವಾನಂದ ಧರೆಗೊಂಡ, ಶಿಕ್ಷಕರಾದ ಮಂಜುನಾಥ ಲಕ್ಷ್ಮೀಶ್ವರ, ಚಂದ್ರಕಲಾ ಗೋಡಿ, ಗಿರಿಜಾ ಹಿರೇಮಠ, ಸುರೇಖಾ ಮೇಲ್ಮನಿ, ಮಲ್ಲಿಕಾರ್ಜುನ ಗುಡೂರು, ರಾಜಶೇಖರ ಹಿರೇಮಠ ಗ್ಯಾನಪ್ಪ ಗುದ್ಲಿ, ಗ್ರಾಮದ ಪ್ರಮುಖರಾದ ಹನುಮಂತಪ್ಪ ಅಂಗಡಿ, ಕುಮಾರಗೌಡ ಪೊಲೀಸ್ ಪಾಟೀಲ್, ಗ್ರಾಪಂ ಸದಸ್ಯರಾದ ಬಾಳಮ್ಮ ಆಡಿನ್, ಶರಣಪ್ಪ ಕೌದಿ, ಗಂಗಮ್ಮ ಜೈನರ್, ಹನುಮವ್ವ ಮಾದರ್ ಸೇರಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ಗೋಧಿ ಹುಗ್ಗಿ ಊಟ ಉಣಬಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net