

ಹುಬ್ಬಳ್ಳಿ : ಒಂದು ದಿನ ಮುಂಚೆ ಅಧಿವೇಶನ ಮೊಟಕುಗೊಳಿಸಿರುವ ಸರ್ಕಾರದ ಕ್ರಮವನ್ನು ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಖಂಡಿಸಿದ್ದಾರೆ.
ವಿಧಾನಸಭೆ ಅಧಿವೇಶನದಲ್ಲಿ ವಾಲ್ಮೀಕಿ ಹಗರಣ ಮತ್ತು ಮೂಡಾ ಚರ್ಚೆಗೆ ಹೊತ್ತಾಯಿಸಿ ಅಹೋರಾತ್ರಿ ಧರಣಿ ನಡೆಸಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆಗೆ ಅವಕಾಶ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರದಂದು ಸಂಪುಟದ ಸಭೆ ನಡೆಸಿ, ಬೆಂಗಳೂರು ಗ್ರಾಮಾಂತರದ ರಾಮನಗರವನ್ನು ಬೆಂಗಳೂರು ದಕ್ಷಿಣವೆಂದು ನಾಮಕರಣ ಮಾಡಲು ಸರ್ಕಾರ ಮುಂದಾಗಿದೆ. ಕಾಂಗ್ರೆಸ್ಗೆ ರಾಮನ ಹೆಸರು ಕೇಳುವುದು ಅಲರ್ಜಿ. ಹೀಗಾಗಿ, ರಾಮನಗರ ಹೆಸರನ್ನು ಬದಲಾವಣೆ ಮಾಡಲು ಹೊರಟಿರುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಮಳೆಯಿಂದ ಅತಿವೃಷ್ಟಿ, ಅನಾವೃಷ್ಟಿಯಾಗಿದೆ. ಸಾವು, ನೋವುಗಳು ಸಂಭವಿಸುತ್ತಿವೆ. ರೈತರು ಕಣ್ಣೀರು ಇಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಅನೇಕ ಜಿಲ್ಲೆಗಳ ಕ್ಲಿಷ್ಟಕರ ಪರಿಸ್ಥಿತಿ ನಿಭಾಯಿಸುವುದನ್ನು ಬಿಟ್ಟು, ಬೆಂಗಳೂರು ಗ್ರಾಮಾಂತರ ರಾಮನಗರವನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡಲು ಹೊರಟಿರುವುದು ಲಜ್ಜೆಗೇಡಿತನ ಎಂದು ಟೀಕಿಸಿದ್ದಾರೆ