

ಬೆಂಗಳೂರು: ಕರ್ನಾಟಕ-ಗೋವಾ ವಿಭಾಗದ ಆದಾಯ ತೆರಿಗೆ ಇಲಾಖೆ (ಐಟಿ)ಯಿಂದ ದಾಳಿಗೊಳಗಾದ ಮೂರು ಗುತ್ತಿಗೆ ಕಂಪನಿ ಮಾಲೀಕರು ಅಕ್ರಮವಾಗಿ ಸಂಪಾದಿಸಿರುವ 750 ಕೋಟಿ ರೂ.ಗೂ ಅಧಿಕ ಮೊತ್ತವನ್ನು ವಿವಿಧ ಉದ್ಯಮಗಳಲ್ಲಿ ಹೂಡಿಕೆ ಮಾಡಿರುವುದು ಪತ್ತೆಯಾಗಿದೆ.
ಅ.7ರಂದು ರಾಜ್ಯದ ಕ್ಲಾಸ್-1 ಗುತ್ತಿಗೆದಾರರಾದ ಡಿವೈ ಉಪ್ಪಾರ್, ಸೋಮಶೇಖರ್, ಜಯಶೀಲ ಶೆಟ್ಟಿ, ಶ್ರೀನಿವಾಸ್, ಲಕ್ಷ್ಮೀಕಾಂತ್, ರಾಹುಲ್ ಎಂಟರ್ಪ್ರೖೆಸಸ್ ಮಾಲೀಕ ಅರವಿಂದ್ ಸೇರಿ ಮೂರು ಗುತ್ತಿಗೆ ಕಂಪನಿಗಳಿಗೆ ಸೇರಿದ 47 ಕಡೆಗಳಲ್ಲಿ ದಾಳಿ ನಡೆಸಿದಾಗ ಮಹತ್ವದ ದಾಖಲೆಗಳು ಸಿಕ್ಕಿತ್ತು. ಈ ದಾಖಲೆ ಪರಿಶೀಲಿಸಿದಾಗ ನೀರಾವರಿ ಹಾಗೂ ಹೆದ್ದಾರಿ ಯೋಜನೆ ಕಾಮಗಾರಿಗೆ ಸರ್ಕಾರದಿಂದ ಬಿಡುಗಡೆಯಾದ ಸಾವಿರಾರು ಕೋಟಿ ರೂ. ಮೊತ್ತದ ಟೆಂಡರ್ ಹಣವನ್ನು ಗುತ್ತಿಗೆದಾರರು ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿರುವುದು ಕಂಡುಬಂದಿದೆ.
ಆದರೆ, ಲೆಕ್ಕ ಪರಿಶೋಧಕರ ಸಹಾಯ ಪಡೆದು ಬೋಗಸ್ ಬಿಲ್ಗಳನ್ನು ತಯಾರಿಸಿ ಕಾರ್ವಿುಕರ ನಿರ್ವಹಣೆ ಹಾಗೂ ಟೆಂಡರ್ ಕಾಮಗಾರಿಗೆ ಈ ಹಣ ವಿನಿಯೋಗಿಸಿರುವುದಾಗಿ ತಪು್ಪಲೆಕ್ಕ ತೋರಿಸಿದ್ದಾರೆ. ಕಳೆದ 3 ವರ್ಷಗಳಲ್ಲಿ ಉದ್ಯಮಗಳಿಂದ ಕೋಟ್ಯಂತರ ರೂ. ಲಾಭಾಂಶ ಪಡೆದಿರುವ ಗುತ್ತಿಗೆದಾರರು ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚಿಸಿರುವುದು ಗೊತ್ತಾಗಿದೆ.
ನೂರಾರು ಕೋಟಿ ರೂ. ಟೆಂಡರ್ ಹಣವನ್ನು ಬೇನಾಮಿ ವ್ಯಕ್ತಿಯ ಹೆಸರಿನಲ್ಲಿ ಹೂಡಿಕೆ ಮಾಡಿರುವುದಕ್ಕೆ ಐಟಿಗೆ ಕೆಲ ದಾಖಲೆ ಸಿಕ್ಕಿವೆ. ದಾಳಿಗೊಳಗಾದ ಮೂರು ಗುತ್ತಿಗೆ ಕಂಪನಿ ಮಾಲೀಕರು ಹಾಗೂ ಅವರೊಂದಿಗೆ ವ್ಯವಹಾರ ನಡೆಸಿದ 30ಕ್ಕೂ ಅಧಿಕ ಜನರಿಗೆ ಸಮನ್ಸ್ ನೀಡಿ, ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲು ಐಟಿ ಮುಂದಾಗಿದೆ.
ಕೋಟಿ-ಕೋಟಿ ಗುತ್ತಿಗೆ: ಗುತ್ತಿಗೆದಾರರಾದ ಡಿವೈ ಉಪ್ಪಾರ್, ಸೋಮಶೇಖರ್, ರಾಹುಲ್ ಎಂಟರ್ ಪ್ರೖೆಸಸ್ ಮಾಲೀಕ ರಾಹುಲ್, ಪ್ರಭಾವಿ ರಾಜಕಾರಣಿ ಆಪ್ತ ಉಮೇಶ್ ಬಳಿ ಅಧಿಕ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ. ಗುತ್ತಿಗೆದಾರ ಡಿ.ವೈ ಉಪ್ಪಾರ್ ಹಲವು ನೀರಾವರಿ ಯೋಜನೆ ಗುತ್ತಿಗೆ ಪಡೆದಿದ್ದರು. ಉಪ್ಪಾರ್ ಗುತ್ತಿಗೆ ಪಡೆದ ಕಾಮಗಾರಿಗಳ ವಿರುದ್ದ ಈ ಹಿಂದೆಯೂ ಹಲವು ಆರೋಪ ಕೇಳಿ ಬಂದಿತ್ತು. ಹೇಮಾವತಿ ಎಡದಂಡೆ ನಾಲೆ-562 ಕೋಟಿ, ಸಾಹುಕಾರ್ ಚೆನ್ನಯ್ಯ ನಾಲೆ ಆಧುನೀಕರಣ-809 ಕೋಟಿ, ಘಟಪ್ರಭ ಎಡದಂಡೆ ಕಾಲುವೆ ಆಧುನೀಕರಣ - 573 ಕೋಟಿ ರೂ., 160 ಕೆರೆ ತುಂಬಿಸುವ ಯೋಜನೆ - 333 ಕೋಟಿ ರೂ., ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣ-750 ಕೋಟಿ ರೂ., ಮಲಪ್ರಭಾ ಕಾಲುವೆ ದುರಸ್ತಿ-1 ಸಾವಿರ ಕೋಟಿ ರೂ. ಸೇರಿ ಸಾವಿರಾರು ಕೋಟಿ ರೂ. ಮೌಲ್ಯದ ಗುತ್ತಿಗೆ ಹಿಡಿದಿದ್ದರು. ಈ ಕಾಮಗಾರಿಯಲ್ಲೂ ಬೋಗಸ್ ಬಿಲ್ ಮೂಲಕ ಅಕ್ರಮ ಎಸಗಿರುವ ಆರೋಪ ಕೇಳಿ ಬಂದಿದೆ. ಸೋಮಶೇಖರ್ ಕೆಲ ವರ್ಷಗಳಿಂದ ನೀರಾವರಿ ಹಾಗೂ ಹೆದ್ದಾರಿ ಯೋಜನೆಗಳಲ್ಲಿ ನೂರಾರು ಕೋಟಿ ರೂ. ಮೌಲ್ಯದ ಟೆಂಡರ್ ಪಡೆದು ಇದೇ ಮಾದರಿಯಲ್ಲಿ ತೆರಿಗೆ ವಂಚಿಸಿರುವುದು ಗೊತ್ತಾಗಿದೆ. ದಾಳಿಗೊಳಗಾದ ಗುತ್ತಿಗೆದಾರರಿಗೆ ಸರ್ಕಾರ ದೊಡ್ಡ ಯೋಜನೆಗಳ ಟೆಂಡರ್ ಸಿಗಲು ಸಹಕರಿಸಿದ್ದ ಉಮೇಶ್, ಇದಕ್ಕಾಗಿ ಅವರಿಂದ ಕೋಟ್ಯಂತರ ರೂ. ಪಡೆದಿದ್ದಾರೆ ಎನ್ನಲಾಗಿದೆ. ಟೆಂಡರ್ ಕಾಮಗಾರಿಗೆ ಸಲಕರಣೆ ಪೂರೈಸುತ್ತಿದ್ದ ರಾಹುಲ್ ಎಂಟರ್ ಪ್ರೖೆಸಸ್ ಸಂಸ್ಥೆ ಅವರ ಜತೆಗೆ ಒಳ ಒಪ್ಪಂದ ಮಾಡಿಕೊಂಡು ನಕಲಿ ಬಿಲ್ ತಯಾರಿಸಿ ತೆರಿಗೆ ವಂಚಿಸಿದೆ. ಐಟಿ ಅಧಿಕಾರಿಗಳು ಪತ್ತೆಯಾದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ಮುಂದುವರಿಸಿದ್ದಾರೆ.