ಮುಸ್ಲಿಮರಿಗೆ ಟೆಂಡರ್ ಮೀಸಲಾತಿ ಅಪಾಯಕಾರಿ ಹೆಜ್ಜೆ : ಸಂಸದ ಯದುವೀರ್ ಕಳವಳ

yaduveer
Published on

ಮೈಸೂರು: ಟೆಂಡರ್‌ಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲು ನೀಡಲು ರಾಜ್ಯ ಸರ್ಕಾರ ಮುಂದಾಗಿರುವ ಪ್ರಸ್ತಾಪದಿಂದ ನಾನು ತೀವ್ರವಾಗಿ ವಿಚಲಿತನಾಗಿದ್ದೇನೆ. ಸಮಾನತೆ ಮತ್ತು ಅರ್ಹತೆಯ ತಳಹದಿಯನ್ನೇ ಸರ್ಕಾರ ಹಾಳುಮಾಡಿ ಸಮಾಜವನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸುವತ್ತ ಸಾಗುತ್ತಿರುವುದು ಅಪಾಯಕಾರಿ ಹೆಜ್ಜೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಳವಳ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಗುತ್ತಿಗೆಗಳನ್ನು ಅರ್ಹತೆ, ಸಾಮರ್ಥ್ಯ ಮತ್ತು ಬದ್ಧತೆಯ ಆಧಾರದ ಮೇಲೆ ನೀಡಬೇಕೇ ಹೊರತು ಧಾರ್ಮಿಕ ಸಂಬಂಧಗಳ ಮೇಲೆ ಅಲ್ಲ. ಈ ಪ್ರಸ್ತಾಪವು ಪ್ರತಿಭೆಗಿಂತ ಧರ್ಮಕ್ಕೆ ಆದ್ಯತೆ ನೀಡುವ ಮೂಲಕ ಪ್ರತಿಯೊಬ್ಬ ನಾಗರಿಕರಿಗೆ ಗಂಭೀರವಾದ ಅಪಚಾರ ವನ್ನು ಮಾಡುತ್ತದೆ ಮತ್ತು ಇದು ಸಾರ್ವಜನಿಕರ ನಂಬಿಕೆ ಮತ್ತು ಏಕತೆಯನ್ನು ಕುಗ್ಗಿಸುವ ಹುನ್ನಾರ ಎಂಬಂತಿದೆ ಎಂದು ಹೇಳಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮತ-ಬ್ಯಾಂಕ್ ರಾಜಕೀಯಕ್ಕಿಂತ ಅರ್ಹತೆ ಮತ್ತು ಪಾರದರ್ಶಕತೆಗೆ ಆದ್ಯತೆ ನೀಡಬೇಕು. ಈ ಧಾರ್ಮಿಕ ಸಂಘರ್ಷದ ಪ್ರಸ್ತಾಪವನ್ನು ಕೈಬಿಡಬೇಕು. ನ್ಯಾಯಸಮ್ಮತ ಮತ್ತು ಸಮಾನತೆಗೆ ರಾಜಿ ಮಾಡಿಕೊಳ್ಳದೆ ಅಂಚಿನಲ್ಲಿರುವ ಸಮುದಾಯಗಳನ್ನು ನಿಜವಾಗಿಯೂ ಸಬಲೀಕರಣಗೊಳಿಸುವ ನೀತಿಗಳ ಮೇಲೆ ಕೇಂದ್ರೀಕರಿಸಬೇಕೆಂದು ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ. ನಮ್ಮ ಸಮಾಜವನ್ನು ಛಿದ್ರಗೊಳಿಸುವ ಯಾವುದೇ ಪ್ರಯತ್ನವನ್ನು ತಿರಸ್ಕರಿಸೋಣ ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಸಮಾನವಾಗಿ ಗೌರವಿಸುವ ಕರ್ನಾಟಕಕ್ಕಾಗಿ ಒಗ್ಗಟ್ಟಾಗಿ ನಿಲ್ಲೋಣ ಎಂದು ಕರೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net