ಟೆಂಡರ್ ಪಡೆದ ಮಳಿಗೆಗಳಲ್ಲಿ ಅನ್ಯರ ವ್ಯಾಪಾರ !

2 KST 01
ಕುಷ್ಟಗಿ ಮಾರುತಿ ವೃತ್ತದಲ್ಲಿರುವ ತಾಪಂ ವಾಣಿಜ್ಯ ಮಳಿಗೆಗಳ ಹೊರನೋಟ.
Published on

ಕುಷ್ಟಗಿ: ಪಟ್ಟಣದ ತಾಪಂಗೆ ಸೇರಿದ ವಾಣಿಜ್ಯ ಮಳಿಗೆಗಳ ಟೆಂಡರ್ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಕಳೆದ 12ವರ್ಷಗಳ ಹಿಂದೆ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಮಳಿಗೆ ಪಡೆದ ವ್ಯಾಪಾರಿಗಳೇ ಈಗಲೂ ಮುಂದುವರಿದಿದ್ದು, ಬೇರೆಯವರಿಗೆ ಅವಕಾಶ ಇಲ್ಲದಂತಾಗಿದೆ.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿರುವ ಖಾಸಗಿ ವಾಣಿಜ್ಯ ಮಳಿಗೆಗಳಿಗೆ ಭಾರಿ ಬೇಡಿಕೆ ಇದೆ. ಲಕ್ಷಾಂತರ ರೂ.ಗಳ ಮುಂಗಡ ಪಾವತಿಯ ಜತೆಗೆ ಕನಿಷ್ಠ 10ಸಾವಿರದಿಂದ 25ಸಾವಿರ ರೂ.ಗಳ ವರೆಗೆ ಮಾಸಿಕ ಬಾಡಿಗೆ ಪಾವತಿಸಿ ವ್ಯಾಪಾರ ವಹಿವಾಟು ನಡೆಸುವ ಅನಿವಾರ್ಯತೆ ಇದೆ. ಖಾಸಗಿ ಮಳಿಗೆಗಳಿಗೆ ಹೋಲಿಸಿದರೆ ಗಜೇಂದ್ರಗಡ ಹಾಗೂ ಬಸ್ ನಿಲ್ದಾಣದ ಪ್ರಮುಖ ರಸ್ತೆಗಳು ಸಂಧಿಸುವ ಹೃದಯ ಭಾಗದಲ್ಲಿರುವ ತಾಪಂ ಮಳಿಗೆಗಳ ಬಾಡಿಗೆ ತೀರಾ ಕಡಿಮೆ ಇದೆ. ಮಳಿಗೆಗಳ ಗಾತ್ರ ಆಧರಿಸಿ ಕನಿಷ್ಠ 500ರೂ.ಗಳಿಂದ ಗರಿಷ್ಠ 7ಸಾವಿರ ರೂ.ಗಳ ವರಗೆ ಬಾಡಿಗೆ ನಿಗದಿ ಮಾಡಲಾಗಿದೆ. ಆದಾಗ್ಯೂ ಬಹುತೇಕರು ಸಕಾಲಕ್ಕೆ ಬಾಡಿಗೆ ಪಾವತಿಸದೆ ಉದಾಸೀನ ತೋರುತ್ತಿದ್ದಾರೆ. ಕೆಲವರು ವರ್ಷಗಟ್ಟಲೇ ಬಾಡಿಗೆ ಪಾವತಿಸದೆ ಮುಂದುವರಿದಿದ್ದು, ಇನ್ನೂ ಕೆಲವರು ದೀರ್ಘ ಕಾಲದ ಬಾಕಿ ಇರಿಸಿಕೊಂಡಿದ್ದಾರೆ. ತಾಪಂ ಅಧಿಕಾರಿಗಳು ನೀಡಿರುವ ಬಾಡಿಗೆ ವಸೂಲಿಯ ಜೂ.ಅಂತ್ಯದ ವರೆಗಿನ ಮಾಹಿತಿಯಂತೆ 54ಮಳಿಗೆಗಳ ಒಟ್ಟು 22.59ಲಕ್ಷ ರೂ. ಬಾಡಿಗೆ ಬಾಕಿ ಇದೆ. ಅಚ್ಚರಿ ಎಂದರೆ ಕೆಲವರು 60ಸಾವಿರದಿಂದ 5ಲಕ್ಷ ರೂ.ಗಳ ವರೆಗೆ ಬಾಕಿ ಇರಿಸಿಕೊಂಡಿದ್ದಾರೆ.

ಅಧಿಕಾರಿಗಳ ಜಾಣ ಕುರುಡು !

ಈ ಹಿಂದೆ ಟೆಂಡರ್‌ನಲ್ಲಿ ಮಳಿಗೆ ಪಡೆದ ಕೆಲವರು ಸರ್ಕಾರಿ ಮಳಿಗೆಗಳನ್ನು ಸ್ವಂತ ಮಳಿಗೆಗಳೆಂದು ಭಾವಿಸಿಕೊಂಡಿದ್ದಾರೆ. ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಹರಾಜಿನ ದರಕ್ಕಿಂತ ಹೆಚ್ಚಿನ ದರಕ್ಕೆ ಬೇರೆಯವರಿಗೆ ಬಾಡಿಗೆ ನೀಡಿ ಲಾಭ ಕಂಡುಕೊಳ್ಳುತ್ತಿದ್ದಾರೆ. ಹೆಚ್ಚು ಬಾಡಿಗೆ ಪಾವತಿಸಲು ಶಕ್ತರಿರದವರಿಗೆ ಅನುಕೂಲವಾಗಲೆಂದು ಸರ್ಕಾರ ಕಡಿಮೆ ಬಾಡಿಗೆ ನಿಗದಿ ಮಾಡಿ ಅನುಕೂಲ ಕಲ್ಪಿಸಿಕೊಟ್ಟರೆ ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದು ತಾಪಂ ಅಧಿಕಾರಿಗಳ ಗಮನಕ್ಕಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಅನುಮಾನಕ್ಕೆಡೆಮಾಡಿದೆ. ಪ್ರತಿ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕಿದೆ ಎಂಬ ಒತ್ತಾಯ ಕೇಳಿಬಂದಿದೆ.

ತಾಪಂ ಮಳಿಗೆಗಳ ಟೆಂಡರ್ ಪ್ರಕ್ರಿಯೆ ನಡೆಸಲು ದಿನ ನಿಗದಿ ಮಾಡಲಾಗಿತ್ತು. ಮಳಿಗೆಗಳಲ್ಲಿರುವ ವ್ಯಾಪಾರಿಗಳು ಟೆಂಡರ್‌ನ ನಿಯಮಾವಳಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಟೆಂಡರ್‌ನಲ್ಲಿ ಪಡೆದ ಮಳಿಗೆಗಳನ್ನು ಬೇರೆಯವರಿಗೆ ಬಾಡಿಗೆ ನೀಡುತ್ತಿರುವುದು ಗಮನಕ್ಕಿದೆ. ಅಂತಹ ವ್ಯಾಪಾರಿಗಳಿಗೆ ನೋಟಿಸ್ ನೀಡಲು ಹಾಗೂ ಬಾಡಿಗೆ ವಸೂಲಿಗೆ ತಾಪಂ ಇಒಗೆ ಸೂಚಿಸಲಾಗಿದೆ. ಮಲ್ಲಿಕಾರ್ಜುನ ತೊದಲಬಾಗಿ ಜಿಪಂ ಉಪ ಕಾರ್ಯದರ್ಶಿ(ತಾಪಂ ಆಡಳಿತಾಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net