ಲಿಂಗಸುಗೂರಿನಲ್ಲಿ 50 ಹಾಸಿಗೆ ಆಸ್ಪತ್ರೆಗೆ ಟೆಂಡರ್ ಪ್ರಕ್ರಿಯೆ

lng dho
ಲಿಂಗಸುಗೂರು ಸಾರ್ವಜನಿಕ ಆಸ್ಪತ್ರೆಗೆ ಡಿಎಚ್‌ಒ ಡಾ.ಸುರೇಂದ್ರ ಬಾಬು ಗುರುವಾರ ಭೇಟಿ ನೀಡಿದ್ದರು.ಮುಖ್ಯ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್, ವೈದ್ಯರಾದ ಗಣೇಶ, ಚಂದ್ರಶೇಖರ ಇದ್ದರು.
Published on

ಲಿಂಗಸುಗೂರು: ಪಟ್ಟಣಕ್ಕೆ ಮಂಜೂರಾಗಿರುವ 50 ಹಾಸಿಗೆ ಆಸ್ಪತ್ರೆ (ಕ್ರಿಟಿಕಲ್ ಕೇರ್ ಸೆಂಟರ್) ಮಂಜೂರಾಗಿದ್ದು, ಕಟ್ಟಡ ನಿರ್ಮಾಣ ಮಾಡಲು ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದು ಡಿಎಚ್‌ಒ ಡಾ.ಸುರೇಂದ್ರ ಬಾಬು ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಸಿಯು ಸೌಲಭ್ಯ ಹೊಂದಿರುವ ಕ್ರಿಟಿಕಲ್ ಕೇರ್ ಸೆಂಟರ್‌ನಲ್ಲಿ ಅಪಘಾತಕ್ಕೀಡಾಗಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಇದಕ್ಕೆ ಬೇಕಾದ ಅಗತ್ಯ ವೈದ್ಯರು, ಸಿಬ್ಬಂದಿ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನೂರು ಹಾಸಿಗೆವುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಕಾಮಗಾರಿ ಬಹುತೇಕ ಮುಗಿದಿದೆ. ಇನ್ನೊಂದು ತಿಂಗಳಲ್ಲಿ ಸಣ್ಣಪುಟ್ಟ ಕೆಲಸ ಪೂರ್ಣಗೊಳಿಸಿ ಉದ್ಘಾಟನೆ ಮಾಡಲಾಗುವುದು. ತಜ್ಞ ವೈದ್ಯರು, ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಲಾಗುವುದು. ಮ್ಯಾಕ್ರೋ ಯೋಜನೆಯಡಿ ಲಿಂಗಸುಗೂರಿಗೆ ಒದಗಿಸಿರುವ ಮೊಬೈಲ್ ಘಟಕ ವಾಹನಕ್ಕೆ ವೈದ್ಯರು, ಲ್ಯಾಬ್ ಟೆಕ್ನಿಷಿಯನ್, ಚಾಲಕರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಸಂಚಾರಿ ಚಿಕಿತ್ಸೆ ವಾಹನದಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗಲಿದೆ ಎಂದರು.

ತಾಲೂಕಿನ ಹಾಲಭಾವಿ ಗ್ರಾಮದಲ್ಲಿ ಜ್ವರ ಬಾಧೆಯಿಂದ ಬಳಲುತ್ತಿರುವವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಗಿದೆ. 250 ಜನರ ರಕ್ತ ಪರೀಕ್ಷೆ ಮಾಡಿದ್ದು, ಯಾವುದೇ ಡೆಂೆ ಪ್ರಕರಣ ಕಂಡುಬಂದಿಲ್ಲ. 17 ಜನರ ರಕ್ತ ಮಾದರಿ ಪಡೆದು ರಾಯಚೂರಿನ ಪ್ರಯೋಗಾಲಯದಲ್ಲಿ ಕ್ರಾಸ್ ಟೆಸ್ಟ್ ಮಾಡಿದ್ದು, ಅಲ್ಲಿಯೂ ಗಂಭೀರ ಕಾಯಿಲೆ ಕಂಡುಬಂದಿಲ್ಲ. ಹಾಲಭಾವಿ ಗ್ರಾಮದಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರ ತೆರೆದಿದ್ದು, ಜನರು ಭಯಪಡುವ ಅಗತ್ಯವಿಲ್ಲ. ಕಳೆದೊಂದು ವಾರದಿಂದ ಜಿಲ್ಲಾದ್ಯಂತ ನೆಗಡಿ, ಕೆಮ್ಮಿನಿಂದ ಬಳಲುವವರ ಪ್ರಕರಣ ಹೆಚ್ಚಿದ್ದು, ಒಂದೇ ಮನೆಯಲ್ಲಿದ್ದವರಿಗೆ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಗ್ರಾಮೀಣ ಭಾಗದಲ್ಲಿ ಸ್ವಚ್ಛತೆ ಕಾಪಾಡಲು ತಿಳಿಸಲಾಗಿದೆ ಎಂದು ಡಿಎಚ್‌ಒ ಸುರೇಂದ್ರ ಬಾಬು ತಿಳಿಸಿದರು. ಮುಖ್ಯ ವೈದ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್, ವೈದ್ಯರಾದ ಗಣೇಶ, ಚಂದ್ರಶೇಖರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net