ಬೊಮ್ಮಾಯಿ ಸರ್ಕಾರದಿಂದ ಟೆಂಡರ್ ಕಿಕ್‌ಬ್ಯಾಕ್, ಮಾಜಿ ಸಚಿವ ಎಚ್. ವಿಶ್ವನಾಥ ಗಂಭೀರ ಆರೋಪ

Screenshot_2023-08-13-17-25-44-91.jpg
Published on

ಬೆಳಗಾವಿ: ವಿಧಾನಸಭೆ ಚುನಾವಣೆಗೂ ಮುನ್ನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 1.5 ಲಕ್ಷ ಕೋಟಿ ರೂ. ಮೌಲ್ಯದ ಟೆಂಡರ್ ಕರೆದು ಕಿಕ್‌ಬ್ಯಾಕ್ ತೆಗೆದುಕೊಂಡಿದೆ ಎಂದು ಮಾಜಿ ಸಚಿವ ಎಚ್. ವಿಶ್ವನಾಥ ಗಂಭೀರ ಆರೋಪ ಮಾಡಿದರು.
 ನಗರದಲ್ಲಿ ಭಾನುವಾರ ಬಿಬಿಎಂಪಿ ಗುತ್ತಿಗೆದಾರರಿಂದ ಕಮಿಷನ್ ಆರೋಪದ ವಿಚಾರಕ್ಕೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಮಿಷನ್ ತೆಗೆದುಕೊಂಡಿದಕ್ಕೇ ನೀವು ಮನೆ ಸೇರಿದ್ದೀರಿ ಎಂದು ಬಿಜೆಪಿಗೆ ಟಾಂಗ್ ನೀಡಿದರು. ವಿಧಾನಸಭೆ ಚುನಾವಣೆಯಲ್ಲಿ ಏಕೆ ಗೆಲ್ಲಲಿಲ್ಲ? ಏನೇನು ತೆಗೆದುಕೊಂಡಿರಿ ಎಂದು ನಿಮ್ಮ ಪಕ್ಕದಲ್ಲಿದ್ದವರೇ ಹೇಳಿದ್ದಾರೆ. ಮಾತನಾಡುವುದು ಸುಲಭ. ಮಾತನಾಡುವವನು ಸತ್ಯವಂತನಿರಬೇಕು. ಇಡೀ ದೇಶ, ರಾಜ್ಯದಲ್ಲಿ ನೀ ಕಳ್ಳ, ನೀ ಕಳ್ಳ ಎನ್ನುತ್ತಾರೆ. ಆದರೆ, ಯಾರು ಕಳ್ಳ ಎಂದು ಜನ ತೀರ್ಮಾನ ಮಾಡಿದ್ದಾರೆ. ಜನರ ತೀರ್ಮಾನಕ್ಕೆ ಗೌರವ ಕೊಟ್ಟು ಕಾಂಗ್ರೆಸ್ ಸರ್ಕಾರಕ್ಕೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದರು.
 ಬೆಳಗಾವಿ ಬಿಜೆಪಿಯಲ್ಲಿ ರಮೇಶ ಜಾರಕಿಹೊಳಿ ಮತ್ತು ಇತರರೊಡನೆ ಪೈಪೋಟಿ ಇದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಮೇಶ ಜಾರಕಿಹೊಳಿ ನನ್ನ ಸ್ನೇಹಿತ. ಏನೋ ಆಗಿ ಮಂತ್ರಿಯಾದರು. ಹಲವು ಕಾರಣಕ್ಕೆ ಮಂತ್ರಿ ಸ್ಥಾನವೂ ಹೋಯಿತು. ರಾಜ್ಯದಲ್ಲಿ ಬಿಜೆಪಿ ಎಂದಾದರೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದೆಯೇ? ಒಂದು ಸಲ ಕುಮಾರಸ್ವಾಮಿ ಹೆಗಲ ಮೇಲೆ, ಇನ್ನೊಂದು ಸಲ ನಮ್ಮ ಹೆಗಲ ಮೇಲೆ ಕುಳಿತು ಅಧಿಕಾರಕ್ಕೆ ಬಂದರು. ಈಗ ಪೂರ್ತಿಯಾಗಿ ಬಿದ್ದೇ ಹೋದರು. ಬಿಜೆಪಿಗೆ ಕರ್ನಾಟಕದಲ್ಲಿ ಅವಕಾಶ ಇಲ್ಲವೇ ಇಲ್ಲ, ಭವಿಷ್ಯವೂ ಇಲ್ಲ. ಅವರ ನಡವಳಿಕೆ, ನಡೆಸಿದ ಆಡಳಿತಕ್ಕೆ ಜನರು ರೋಸಿ ಹೋಗಿದ್ದಾರೆ ಎಂದರು.
 ಮೈಸೂರಿನಿಂದ ಎಚ್.ವಿಶ್ವನಾಥ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾಕಾಗಬಾರದು? ನಾನು ಕಾಂಗ್ರೆಸ್‌ನಲ್ಲೇ ಸಂಸದ ಆಗಿದ್ದವನು. ಕಾಂಗ್ರೆಸ್ ಕಾರ್ಯಕರ್ತನಾಗಿ ಮೇಲಕ್ಕೆದ್ದು ಬಂದವನು. ಹಲವು ಕಾರಣಗಳಿಂದ ನಾನು ಹೊರಬಂದಿದ್ದೇನೆ. 40 ವರ್ಷ ಕಾಂಗ್ರೆಸ್‌ನಲ್ಲೇ ಇದ್ದವನು. ಪಕ್ಷ ರಾಜಕಾರಣ ಬಲವಾಗಿದ್ದಾಗ ಕಾಂಗ್ರೆಸ್ ಇಂದಿರಾ ಗಾಂಧಿ ಹೆಸರಲ್ಲಿ ಯಾರು ನಿಂತರೂ ಗೆದ್ದು ಬರುತ್ತಿದ್ದರು. ಇದೀಗ ಪಕ್ಷ ರಾಜಕಾರಣ ಹೋಗಿ ವ್ಯಕ್ತಿ ರಾಜಕಾರಣ ಬಂದಿದೆ. ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ, ದೇವೇಗೌಡರ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ಪಕ್ಷ ರಾಜಕಾರಣ ಸತ್ತು ಹೋದ ಬಳಿಕ ಆಂತರಿಕ ಪ್ರಜಾಪ್ರಭುತ್ವ ಸತ್ತು ಹೋಗಿದೆ ಎಂದು ಅಭಿಪ್ರಾಯಪಟ್ಟರು.
 ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತು ನಾನು ಇನ್ನೂ ಮಾತನಾಡಿಲ್ಲ. ಒಂದು ಸಲ ಕೇಳೋಣ. ಸದ್ಯ ನಾನು ಯಾವ ಪಕ್ಷದ ಸದಸ್ಯನ್ನಲ್ಲ, ಸ್ವತಂತ್ರನಿದ್ದೇನೆ. ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಿ ರಾಜ್ಯಾಧ್ಯಕ್ಷ ಆದೆ. ಆಗ ಜೆಡಿಎಸ್ ಕಚೇರಿಯಲ್ಲೇ ಕಾಂಗ್ರೆಸ್ ನನ್ನ ತಾಯಿ ಅಂತಾ ಹೇಳಿದ್ದೆ. ನಾನು ಹಿಡಿದುಕೊಳ್ಳುವ ಪಕ್ಷದ ಧ್ವಜ ಬೇರೆ ಬೇರೆಯಾಗಬಹುದು. ಆದರೆ, ನನ್ನ ಅಜೆಂಡಾ ಬದಲಾಗಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net