ಅಕ್ರಮದ ದಾಖಲೆ ಕೊಡ್ತೀನಿ, ತನಿಖೆ ಮಾಡ್ತೀರಾ: ಸರ್ಕಾರಕ್ಕೆ ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಕೆ.ಕುಮಾರ್ ಸವಾಲು

Press Meet
Published on

ಮಂಡ್ಯ: ರಾಜ್ಯ ಹೆದ್ದಾರಿ ಯೋಜನೆ ಹಂತ 4ರ ಟೆಂಡರ್‌ನಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಈ ಬಗ್ಗೆ ಅಧಿವೇಶನದಲ್ಲಿ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ.ಕುಮಾರಸ್ವಾಮಿ ಚರ್ಚಿಸಬೇಕು. ಇನ್ನು ಕಾಮಗಾರಿಗಳಲ್ಲಿ ಶೇ.40ರಷ್ಟು ಕಮೀಷನ್ ಆರೋಪದ ಬಗ್ಗೆ ದಾಖಲೆಗಳನ್ನು ಕೊಡಿ ಎಂದು ಸರ್ಕಾರ ಕೇಳುತ್ತಿದೆ. ಆದರೆ, ನಾನು ದಾಖಲೆಗಳ ಸಹಿತ ನ್ಯಾಯಾಲಯದ ಮೆಟ್ಟಿಲೇರಿದ್ದೇನೆ. ಪ್ರಕರಣದ ತನಿಖೆ ನಡೆಸಲು ಅನುಮತಿ ನೀಡುತ್ತೀರಾ ಎಂದು ಮದ್ದೂರಿನ ಪ್ರಥಮ ದರ್ಜೆ ಗುತ್ತಿಗೆದಾರ ಎಂ.ಕೆ.ಕುಮಾರ್ ಸವಾಲು ಹಾಕಿದರು.

ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರೂ ಮಾಜಿ ಸಿಎಂಗಳಿಗೆ ಖುದ್ದು ಮಾಹಿತಿ ನೀಡಲಾಗಿದೆ. ಪ್ರಸ್ತುತ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಪ್ಪದೇ ಈ ವಿಚಾರವನ್ನು ಪ್ರಸ್ತಾಪಿಸಿ ಗಂಭೀರ ಚರ್ಚೆ ನಡೆಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದಾಖಲೆಯೊಂದಿಗೆ ಮನವಿ ಮಾಡಿದರು.

4,500 ಕೋಟಿ ರೂ. ಮೊತ್ತದ 160 ಪ್ಯಾಕೇಜ್ ಕಾಮಗಾರಿಗಳಿಗೆ 2019ರ ಫೆ.15ರಂದು ಟೆಂಡರ್ ಆಹ್ವಾನಿಸಲಾಗಿತ್ತು. ಕಡಿಮೆ ಮೊತ್ತದ 394 ಕಾಮಗಾರಿಗಳನ್ನು 160 ಪ್ಯಾಕೇಜ್‌ಗಳಾಗಿ ಮಾರ್ಪಾಡು ಮಾಡಲಾಗಿದೆ. ಮೇಲ್ನೋಟಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಿದಂತೆ ಮಾಡಲಾಗಿದೆ. ಆದರೆ, ಟೆಂಡರ್ ಸಲ್ಲಿಸುವ ಮೊದಲೇ ನಿರ್ಧರಿಸಿದ ಗುತ್ತಿಗೆದಾರರಿಗೆ ಹೆಚ್ಚು ದರ ನೀಡಿ ಟೆಂಡರ್ ಕೊಡಲಾಗಿದೆ. ಇನ್ನು ಟೆಂಡರ್ ಪಡೆದಿರುವ ಗುತ್ತಿಗೆದಾರರು ನಕಲಿ ದಾಖಲೆಗಳನ್ನು ನೀಡಿದ್ದಾರೆ. ಇದು ಗುತ್ತಿಗೆದಾರರು ಮತ್ತು ಅಧಿಕಾರಿಗಳ ನಡುವೆ ನಡೆದಿರುವ ಒಪ್ಪಂದಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.

ಈ ಅಕ್ರಮಗಳ ಬಗ್ಗೆ 2019 ಅ.30ರಂದು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ರಾಜ್ಯ ಹೆದ್ದಾರಿ ಯೋಜನೆ ಹಂತ- 4ರ ಮುಖ್ಯ ಯೋಜನಾಧಿಕಾರಿ, ಆರ್ಥಿಕ ಇಲಾಖೆ, ಎಸಿಬಿ ಮತ್ತು ಲೋಕಾಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಆದರೆ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ಲೋಕಾಯುಕ್ತ ಮತ್ತು ಎಸಿಬಿಗೆ ಸುಳ್ಳು ಮಾಹಿತಿ ನೀಡಿದ್ದರು ಎಂದು ವಿವರಿಸಿದರು.

ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ 23ರಲ್ಲಿ ಈ ಅವ್ಯವಹಾರದ ಬಗ್ಗೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೂರು ನೀಡಿದ್ದೆ. ಆದರೆ, ನಾನು ಟೆಂಡರ್‌ನಲ್ಲಿ ಭಾಗವಹಿಸದಿರುವ ಕಾರಣ ಉಲ್ಲೇಖಿಸಿ ನನ್ನ ದೂರನ್ನು ವಜಾಗೊಳಿಸಲಾಗಿತ್ತು. ಬಳಿಕ ಹೈಕೋರ್ಟ್ ಮೊರೆ ಹೋಗಿದ್ದೆ. ಅಲ್ಲಿ ಕೆಳಗಿನ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ತನಿಖೆಗೆ ಆದೇಶ ಮಾಡಲು ಮತ್ತೊಮ್ಮೆ ದಾಖಲೆಗಳನ್ನು ಪರಿಶೀಲಿಸುವಂತೆ ಹೈಕೋರ್ಟ್ ಆದೇಶಿಸಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net