

ಬೆಂಗಳೂರು: ನಗರದಲ್ಲಿ ಸಂಗ್ರಹಿಸುವ ಕಸವನ್ನು ಸುರಿಯಲಾಗುತ್ತಿರುವ ಕ್ವಾರಿಗಳಲ್ಲಿ ತುಂಬಿರುವ ವಿಷಕಾರಿ ತ್ಯಾಜ್ಯ ದ್ರವ (ಲಿಚ್ಚೆಡ್) ಹೊರ ಸಾಗಿಸಲು ಶೀಘ್ರವೇ ಟೆಂಡರ್ ಆಹ್ವಾನಿಸಲಾಗುವುದು ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳ್ಳಹಳ್ಳಿ, ಮಿಟ್ಟಗಾನಹಳ್ಳಿ ಸೇರಿ ಇತರ ಕ್ವಾರಿಗಳಲ್ಲಿ ತ್ಯಾಜ್ಯ ದ್ರವ ತುಂಬಿ ಸಮಸ್ಯೆ ಸೃಷ್ಟಿಸಿದೆ. ಲಿಚ್ಚೆಡ್ ಅಂತರ್ಜಲಕ್ಕೆ ಸೇರಿ ವಿಷವಾಗುವ ಸಾಧ್ಯತೆ ಇದೆ. ಇದನ್ನಾಧರಿಸಿ ಬೇಗನೆ ಸಾಗಣೆ ಮಾಡಲು 450 ಕೋಟಿ ರೂ. ಟೆಂಡರ್ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದಕ್ಕೆ ಬೇಗನೆ ಒಪ್ಪಿಗೆ ಸಿಕ್ಕಲಿ ಟೆಂಡರ್ ಆಹ್ವಾನಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ತ್ಯಾಜ್ಯ ದ್ರವವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಿದೆ. ಇದನ್ನು ಕೆಲ ಸುರಕ್ಷತಾ ಕ್ರಮ ಆಧರಿಸಿಯೇ ನಿರ್ವಹಿಸಬೇಕು. ಒಂದು ಲೀ. ಲಿಚ್ಚೆಡ್ ಸಾಗಿಸಲು 1.58 ರೂ. ವೆಚ್ಚವಾಗುವುದೆಂದು ಅಂದಾಜಿಸಲಾಗಿದೆ. ಹಾಗಾಗಿ ಸಾಗಣೆ ಮೊತ್ತ ಹೆಚ್ಚುವ ನಿರೀಕ್ಷೆ ಇದೆ. ಪೂರ್ಣ ಪ್ರಮಾಣದಲ್ಲಿ ಲಿಚ್ಚ್ಚೆಡ್ ಸಾಗಿಸಲು 2-3 ವರ್ಷ ಹಿಡಿಯಬಹುದು. ಕ್ವಾರಿಗಳ ಸುತ್ತಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದಂತೆ ಪಾಲಿಕೆ ಎಚ್ಚರಿಕೆ ವಹಿಸಲಿದೆ ಎಂದು ತಿಳಿಸಿದರು.
ಪ್ರಸ್ತುತ ಕ್ವಾರಿಗಳಲ್ಲಿ ಕಸ ಸುರಿಯುತ್ತಿದ್ದ ಪ್ರಕ್ರಿಯೆಗೆ ತಡೆಯುಂಟು ಮಾಡಿದ್ದ ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಪ್ರತಿಭಟನಾಕಾರರ ಕೆಲ ಅಂಶಗಳನ್ನು ಜಾರಿಗೆ ತರಲು ಒಪ್ಪಲಾಗಿದೆ. ಇದರಿಂದಾಗಿ ರಾತ್ರಿ ವೇಳೆ ಕಸ ಸುರಿಯುವ ಪ್ರಕ್ರಿಯೆ ಜತೆಗೆ ಭಾನುವಾರದಿಂದ ಹಗಲಿನಲ್ಲೂ ಕಸ ಸಾಗಣೆ ಮಾಡಲಾಗುವುದು. ಇದರಿಂದಾಗಿ ನಗರದಲ್ಲಿ ಒಂದೆರಡು ದಿನಗಳಲ್ಲಿ ಕಸ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ನಿವಾರಣೆಯಾಗಲಿದೆ ಎಂದು ಮುಖ್ಯ ಆಯುಕ್ತರು ವಿವರಿಸಿದರು.