ಬಿಎಸ್‌ಡಬ್ಲುಎಂಎಲ್​​ನಿಂದ ತ್ಯಾಜ್ಯ ವಿಲೇವಾರಿ, ಘಟಕ ಸ್ಥಾಪನೆಗೆ ಟೆಂಡರ್

waste dumping
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮಗ್ರ ರೂಪದಲ್ಲಿ ತ್ಯಾಜ್ಯ ವಿಲೇವಾರಿ, ಸಾಗಣೆ ಹಾಗೂ ನಿರ್ವಹಣೆ ಮಾಡುವ ಉದ್ದೇಶದಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರುವ ಸಂಬಂಧ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಗಮ (ಬಿಎಸ್‌ಡಬ್ಲುಎಂಎಲ್) ಗುತ್ತಿಗೆದಾರರಿಂದ ಬಿಡ್ ಆಹ್ವಾನಿಸಲು ಟೆಂಡರ್ ಕರೆದಿದೆ.

ಮನೆ ಮನೆಯಿಂದ ಕಸ ಸಂಗ್ರಹ, ದ್ವಿತೀಯ ಹಂತದ ವರ್ಗಾವಣೆ ಕೇಂದ್ರಗಳಿಗೆ ಸಾಗಣೆ, ಈ ಕೇಂದ್ರಗಳಿಂದ ಸಂಸ್ಕರಣಾ ಘಟಕಗಳಿಗೆ ದ್ವಿತೀಯ ಹಂತದ ಸಾಗಣೆ ಹಾಗೂ ಹೆಚ್ಚಿನ ಸಂಸ್ಕರಣೆ ಮಾಡುವ ಕೆಲಸ ಒಳಗೊಂಡ ಪ್ಯಾಕೇಜ್ ಆಗಿರಲಿದೆ. ಎರಡು ವಲಯಗಳನ್ನು ಸೇರಿ ಒಂದು ಪ್ಯಾಕೇಜ್ ಮಾಡಲಾಗಿದ್ದು, ಪಾಲಿಕೆಯ ಎಂಟೂ ವಲಯಗಳಿಗೆ 4 ಪ್ಯಾಕೇಜ್ ಮಾಡಲಾಗಿದೆ.

ಪ್ಯಾಕೇಜ್ 1ರಲ್ಲಿ ಯಲಹಂಕ ಹಾಗೂ ದಾಸರಹಳ್ಳಿ ವಲಯ ಒಳಗೊಂಡಿದೆ. ಪ್ಯಾಕೇಜ್ 2ರಲ್ಲಿ ಆರ್.ಆರ್.ನಗರ ಹಾಗೂ ಪಶ್ಚಿಮ ವಲಯ, ಪ್ಯಾಕೇಜ್ 3ರಲ್ಲಿ ಮಹದೇವಪುರ ಹಾಗೂ ಪೂರ್ವ ವಲಯ, ಪ್ಯಾಕೇಜ್ 4ರಲ್ಲಿ ಬೊಮ್ಮನಹಳ್ಳಿ ಹಾಗೂ ದಕ್ಷಿಣ ವಲಯ ಒಳಗೊಂಡಿದೆ. ಈ ಪ್ಯಾಕೇಜ್‌ಗಳಲ್ಲಿ ತ್ಯಾಜ್ಯ ಸಂಗ್ರಹ, ಸಾಗಣೆ ಮತ್ತು ಸಂಸ್ಕರಣೆ, ವಿಲೇವಾರಿ ಕಾರ್ಯಕ್ಕೆ ಪ್ರತ್ಯೇಕವಾಗಿ ಬಿಡ್ ಮಾಡಬೇಕಾಗುತ್ತದೆ. ಇಷ್ಟೂ ಕೆಲಸವನ್ನು ಎರಡು ವರ್ಷದ ಅವಧಿಗೆ ಒಟ್ಟು 2,848.27 ಕೋಟಿ ರೂ. ಮೊತ್ತದಷ್ಟು ಬಂಡವಾಳ ಹೂಡಲಾಗುತ್ತದೆ. ಪಿಪಿಪಿ ಮಾದರಿಯಲ್ಲಿ ಯೋಜನೆ ಕಾರ್ಯಗತ ಮಾಡಲು ನಿರ್ಧರಿಸಲಾಗಿದೆ.

ಸದ್ಯ ಹಾಲಿ ತ್ಯಾಜ್ಯ ಸಂಗ್ರಹ ವ್ಯವಸ್ಥೆಯಲ್ಲಿ ಮಂಡೂರು, ಕನ್ನಲ್ಲಿ, ಬೆಳ್ಳಹಳ್ಳಿಯಲ್ಲಿ ಕಸ ವಿಲೇವಾರಿ ಮಾಡಲಾಗುತ್ತಿದೆ. ಈಗ 4 ಬೃಹತ್ ತ್ಯಾಜ್ಯ ಘಟಕ ನಿರ್ವಹಣಾ ಘಟಕ ಸ್ಥಾಪಿಸಿ ಅಲ್ಲಿ ವೈಜ್ಞಾನಿಕವಾಗಿ ಕಸ ವಿಂಗಡಣೆ ಮಾಡಲಾಗುತ್ತದೆ. ಪರಿಸರಕ್ಕೆ ಹಾನಿಯಾಗದಂತೆ ಉಪಕ್ರಮ ಕೈಗೊಳ್ಳಲಾಗುತ್ತದೆ. ಇದನ್ನು ನಿರಂತರವಾಗಿ ವರ್ಷಪೂರ್ತಿ ಕೈಗೊಳ್ಳಲು ದೊಡ್ಡ ಮಟ್ಟದ ಗುತ್ತಿಗೆದಾರರು ಬಮಡವಾಳ ಹೂಡಿ ನಿರ್ವಹಿಸಬೇಕಾಗುತ್ತದೆ. ಈ ವಿಧಾನದಲ್ಲಿ ವೆಚ್ಚವು ತುಸು ಹೆಚ್ಚಳವಾಗಲಿದ್ದರೂ, ಎಲ್ಲ ಹಂತದಲ್ಲಿ ತ್ಯಾಜ್ಯ ನಿರ್ವಹಣೆ ಸಾಧ್ಯವಾಗಲಿದೆ ಎಂದು ನಿಗಮ ಪ್ರತಿಪಾದಿಸಿದೆ.

ತ್ಯಾಜ್ಯ ಘಟಕ ಸ್ಥಳ ಅಂತಿಮ ಬಾಕಿ:

ನಗರದಿಂದ ಹೊರಗೆ ತ್ಯಾಜ್ಯ ವಿಲೇವಾರಿ ಒಳಗೊಂಡ ನಿರ್ವಹಣಾ ವ್ಯವಸ್ಥೆಯಿರುವ ಬೃಹತ್ ಘಟಕಗಳನ್ನು 4 ಕಡೆ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಪ್ರತಿಯೊಂದು ಕಡೆ ತಲಾ 100 ಎಕರೆ ಗುರುತಿಸಲಾಗಿದ್ದು, ಇನ್ನಷ್ಟೇ ಅಂತಿಮಗೊಳಿಸಬೇಕಿದೆ. ಟೆಂಡರ್ ಆಹ್ವಾನಿಸಲು ಸರ್ಕಾರ ಅನುಮೋದನೆ ನೀಡಿರುವುದರಿಂದ ನಿಗಮವು ಟೆಂಡರ್ ಆಹ್ವಾನಿಸಿದೆ.

ಘನತ್ಯಾಜ್ಯ ಟೆಂಡರ್ ವಿವರ:

ಪ್ಯಾಕೇಜ್ ವಿಧ ಸಂಗ್ರಹ/ಸಾಗಣೆ ವಿಲೇ/ಸಂಸ್ಕರಣೆ

ಪ್ಯಾಕೇಜ್ 1 134.95 ಕೋಟಿ 523 ಕೋಟಿ

ಪ್ಯಾಕೇಜ್ 2 204.68 ಕೋಟಿ 378 ಕೋಟಿ

ಪ್ಯಾಕೇಜ್ 3 160.22 ಕೋಟಿ 590 ಕೋಟಿ

ಪ್ಯಾಕೇಜ್ 4 201.42 ಕೋಟಿ 656 ಕೋಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net