

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ಅಮ್ಮನವರಿಗೆ ಲೋಕಕಲ್ಯಾಣಾರ್ಥವಾಗಿ ಐದನೇ ವರ್ಷದ ಸಾಮೂಹಿಕ ಸೀಯಾಳ ಅಭಿಷೇಕ ಮತ್ತು ವಿವಿಧ ಸೇವೆಗಳು ಶುಕ್ರವಾರ ನೆರವೇರಿತು. ದೇವಳದ ಸುತ್ತಲಿನ ಪರಿವಾರ ದೇವರು ಹಾಗೂ ಕ್ಷೇತ್ರದ ಇತರ ಎಲ್ಲ ದೇವಸ್ಥಾನಗಳಲ್ಲಿಯೂ ಸೀಯಾಳ ಅಭಿಷೇಕ ಮಾಡಲಾಯಿತು.
ಅರ್ಚಕರು, ಉಪಾಧಿವಂತ ಕ್ಷೇತ್ರ ಪುರೋಹಿತರು, ದೇವಳದ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರಿಂದ ಈ ಸೇವೆ ನಡೆಯಿತು. ಶ್ರೀ ಮೂಕಾಂಬಿಕೆ ಸ್ವಯಂಭೂಲಿಂಗಕ್ಕೆ ಶತರುದ್ರಾಭಿಷೇಕ, ಕ್ಷೀರಾಭಿಷೇಕ (108 ಲೀಟರ್ ಹಾಲು), ಕುಂಕುಮಾರ್ಚನೆ, ತುಪ್ಪದ ದೀಪ, ಫಲ-ಪುಷ್ಪ, ಸೀರೆ, ಲಡ್ಡು ಸಮರ್ಪಣೆ, ಗುಡಾನ್ನ ನೈವೇದ್ಯ, ಪಂಚಾಮೃತ ಅಭಿಷೇಕ, ಹಾಲು ಪಾಯಸ ಹಾಗೂ ಇನ್ನಿತರ ಸೇವೆಗಳು ನಡೆಯಿತು. ಭಕ್ತರು 4000ಕ್ಕೂ ಅಧಿಕ ಸೀಯಾಳ ಒಪ್ಪಿಸಿ ಈ ಮಹಾತ್ಕಾರ್ಯದಲ್ಲಿ ಭಾಗಿಯಾದರು.
ವಿಶ್ವಾದ್ಯಂತ ಕರೊನಾ ಎರಡನೇ ಅಲೆಯಿಂದ ಅನೇಕ ಸಾವು-ನೋವುಗಳ ಸಂಭವಿಸುತ್ತಿದ್ದು, ಇದು ನಮ್ಮ ದೇಶದ ಯಾವ ಪ್ರಜೆಗಳಿಗೂ ಬಾಧಿಸದೆ ಎಲ್ಲರೂ ಆರೋಗ್ಯವಂತರಾಗಿ ದೇಶ ಸುಭಿಕ್ಷೆಯಾಗಿರಲೆಂದು ಪ್ರಾರ್ಥನೆಯೊಂದಿಗೆ ಪುಷ್ಪಾಲಂಕಾರ ಸಹಿತ ವಿಶೇಷ ಪೂಜೆ ಸಲ್ಲಿಸಲಾಯಿತು.
ಕ್ಷೇತ್ರ ಪುರೋಹಿತ ಗಜಾನನ ಜೋಯಿಸ ನೇತೃತ್ವದಲ್ಲಿ ಈ ಸೇವಾಕೈಂಕರ್ಯ ನಡೆಯಿತು. ದೇವಳದ ಪ್ರಧಾನ ಅರ್ಚಕ ಹಾಗೂ ತಂತ್ರಿ ಕೆ. ರಾಮಚಂದ್ರ ಅಡಿಗ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಅತುಲ್‌ಕುಮಾರ್ ಶೆಟ್ಟಿ, ಸಂಧ್ಯಾ ರಮೇಶ್, ರತ್ನಾ ರಮೇಶ್ ಸಹಕರಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ. ಮಹೇಶ್ ಹಾಗೂ ಅಧೀಕ್ಷಕ ಕೆ. ರಾಮಕೃಷ್ಣ ಅಡಿಗ ಇದ್ದರು.