

ಮೈಸೂರು: ನಗರ ಸಾರಿಗೆ ಬಸ್ ಹಾಗೂ ಎರಡು ಕಾರುಗಳ ನಡುವೆ ಚಾಮುಂಡಿಬೆಟ್ಟದಲ್ಲಿ ಸರಣಿ ಅಪಘಾತವಾಗಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಅಪಘಾತವಾದ ರಭಸಕ್ಕೆ ರಸ್ತೆ ಬದಿಯ ಇದ್ದ ಮೂರಕ್ಕೂ ಹೆಚ್ಚು ವಿದ್ಯುತ್ ಕಂಬಕ್ಕೆ ಬಸ್ ಡಿಕ್ಕಿಯೊಡೆದು ನಿಂತಿದೆ. ಎದುರು ಬರುತ್ತಿದ್ದ ಕಾರಿನ ಮುಂಭಾಗ ಬಹುತೇಕ ನಜ್ಜು ಗುಜ್ಜಾಗಿದ್ದರೆ, ಅದರ ಹಿಂದೆ ಬರುತ್ತಿದ್ದ ಮತ್ತೊಂದು ಕಾರು ಕೂಡಾ ಜಖಂಗೊಂಡಿದೆ.
ಬೆಟ್ಟದಿಂದ ಕೆಳಗೆ ಬರುತ್ತಿದ್ದ ನಗರ ಸಾರಿಗೆ ಬಸ್ ಚಾಲಕನ ಅತಿವೇಗ ಹಾಗೂ ಬ್ರೇಕ್ ವಿಫಲಗೊಂಡಿದ್ದು, ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಕಾರಿನ ಟೈರ್ ಕೂಡಾ ಸ್ಫೋಟಗೊಂಡಿದೆ. ಅಪಘಾತದ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ.
ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲು ತುರ್ತು ಚಿಕಿತ್ಸಾ ವಾಹನ ವ್ಯವಸ್ಥೆ ಮಾಡದೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದರು ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ದಸರಾ ಸಮಯದಲ್ಲಿ ಬೆಟ್ಟಕ್ಕೆ ವಾಹನ ಸಂಚಾರ ಹೆಚ್ಚಾಗಿದ್ದು, ಅಪಘಾತವಾಗಿದ್ದರಿಂದ ವಾಹನಗಳು ಅರ್ಧ ಕಿ.ಮೀ.ನಷ್ಟು ಸಾಲುಗಟ್ಟಿ ನಿಂತಿದ್ದವು. ಸಿದ್ಧಾರ್ಥ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ಸುಗಮಗೊಳಿಸಿದರಲ್ಲದೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಎಸ್‌ಆರ್‌ಟಿಸಿ ತಾಂತ್ರಿಕ ಅಧಿಕಾರಿ ವಿಜಯ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.