

ಮೈಸೂರು: ಅರಮನೆ ಅಂಗಳದಲ್ಲಿ ಡಿ.21ರಿಂದ 10 ದಿನಗಳ ಕಾಲ ಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಮೇಳೈಸಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ನಿತ್ಯ ಬೆಳಗ್ಗೆ 10ರಿಂದ ರಾತ್ರಿ 9 ಗಂಟೆ ವರೆಗೆ ವೀಕ್ಷಣೆಗೆ ಅವಕಾಶ ಇರಲಿದೆ.
ಲಕ್ಷಾಂತರ ಹೂವುಗಳಿಂದ ದೆಹಲಿಯ ಅಕ್ಷರಧಾಮ,ಮುಮ್ಮಡಿ ಕೃಷ್ಣರಾಜ ಒಡೆಯರ್ ಆಕೃತಿ, ರಾಜಲಾಂಛನಗಳು, ನಂಜುಂಡೇಶ್ವರ ದೇವರು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಆಕೃತಿಗಳು ಅರಳಲಿವೆ. 25 ಸಾವಿರ ವಿಭಿನ್ನ ಅಲಂಕಾರಿಕ ಹೂಗಳು, ಕುಂಡಗಳಲ್ಲಿ ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ನಸ್ಟರ್‌ಸಿಯಂ, ಆಂಟಿರೈನಂ, ವರ್ಬಿನ, ಜಿರೇನಿಯಂ, ಕಾಶಿಗೊಂಡೆ, ಆಸ್ಟರ್, ಗೈರಾಲ್ಡಿಯಾ, ಸ್ಪೈಡರ್, ಬೋನ್ಸಾಯ್ ಗಿಡಗಳು ಸೇರಿದಂತೆ ಬಗೆ ಬಗೆಯ ಹೂ ಪ್ರದರ್ಶನ ಇರಲಿದೆ.
ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುವ ಸಮಯದಲ್ಲಿ ಜಯಚಾಮರಾಜ ಒಡೆಯರ್ ಅವರು ರಚಿಸಿರುವ ಕೀರ್ತನೆಗಳು ಸೇರಿದಂತೆ ಶಾಸ್ತ್ರೀಯ ಸಂಗೀತ ಆಲಿಸಲು ಅವಕಾಶ ದೊರೆಯಲಿದೆ. ಫಲಪುಷ್ಪ ಪ್ರದರ್ಶನದ 10 ದಿನ ಸಂಜೆ 7ರಿಂದ ರಾತ್ರಿ 9ರವರೆಗೆ ಅರಮನೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತದೆ.
ಡಿ.21ರಂದು ಸಂ.7.30ಕ್ಕೆ ಗಾಯಕ ಮಧುಬಾಲಕೃಷ್ಣನ್ ತಂಡದಿಂದ ಸಂಗೀತ ಸಂಜೆ, ಡಿ.22ರಂದು ವಿಜಯ್ ಪ್ರಕಾಶ್ ಮತ್ತು ತಂಡ, ಡಿ.23ರಂದು ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮತ್ತು ತಂಡದಿಂದ ಲಯ-ಲಾವಣ್ಯ ಕಾರ್ಯಕ್ರಮ. ಡಿ.24ರಂದು ಚಂಪಕ ಅಕಾಡೆಮಿ ವೃಂದದಿಂದ ಡಿ.ವಿ.ಜಿ ವಿರಚಿತ ಗೇಯ ನೃತ್ಯ ನಾಟಕ, ಡಿ.25ರಂದು ಗಾಯಕರಾದ ದರ್ಶನ್ ನಾರಾಯಣ್, ಐಶ್ವರ್ಯ ರಂಗರಾಜನ್, ಸುನೀಲ್ ಗುಜಗೊಂಡ್, ವಸುಶ್ರೀ ಹಳೆಮನೆ, ಜ್ಞಾನ ಗುರುರಾಜ್ ಮತ್ತು ತಂಡದಿಂದ ಸಂಗೀತ ಯಾನ, ಡಿ.31ರಂದು ರಾತ್ರಿ 11ಕ್ಕೆ ಪೊಲೀಸ್ ಬ್ಯಾಂಡ್ ತಂಡದಿಂದ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ವಾದನ, ಬಳಿಕ ಶಬ್ದರಹಿತ, ಹಸಿರು ಪಟಾಕಿ, ಬಾಣ ಬಿರುಸುಗಳ ಸಿಡಿತದ ಇರುತ್ತದೆ.
ಮೊದಲ ಬಾರಿಗೆ ಪ್ರವೇಶ ಶುಲ್ಕ
ಅರಮನೆ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಮೊದಲ ಬಾರಿಗೆ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ವಯಸ್ಕರಿಗೆ ತಲಾ 30 ರೂ., 10ರಿಂದ 16 ವರ್ಷದ ಮಕ್ಕಳಿಗೆ 10 ರೂ. ಟಿಕೆಟ್ ದರ ಇದ್ದು, 10 ರ್ಷದೊಳಗಿನ ಮಕ್ಕಳಿಗೆ ಮಾತ್ರ ಉಚಿತ ಪ್ರವೇಶ ಇರುತ್ತದೆ.