

ಕಾರವಾರ: ಕರಾವಳಿ, ಮಲೆನಾಡಿನ ಸೆಕೆ ಬಯಲು ಸೀಮೆಯನ್ನು ಹೋಲುತ್ತಿದೆ. ರಾಜ್ಯದಲ್ಲಿ ಅತ್ಯಽಕ ಕಾಡು ಹೊಂದಿರುವ ಜಿಲ್ಲೆ ಎಂದು ಹೆಸರಾದ ಉತ್ತರ ಕನ್ನಡದ ಕಳೆದ ಒಂದು ವಾರದಿಂದ ಬಿಸಿ ಗಾಳಿ ಬೀಸುತ್ತಿದ್ದು, ಕಾಡಿನೂರು ಕುದಿಯುತ್ತಿದೆ. ಜನ ಬೆವರಿ, ಬೆಂದಿದ್ದಾರೆ.
ವಿಶೇಷ ಎಂದರೆ ಜೊಯಿಡಾ, ಶಿರಸಿ ಮುಂತಾದ ಅಚ್ಚ ಮಲೆನಾಡಿನ ಮರಗಳ ಮಧ್ಯದಲ್ಲಿರುವ ಗ್ರಾಮಗಳಲ್ಲೇ ಬಿಸಿಲಿನ ಝಳ ಬೆಚ್ಚಿ ಬೀಳಿಸುತ್ತಿದೆ. ರಾಯಚೂರು, ಕಲಬುರಗಿ ಮುಂತಾದ ಜಿಲ್ಲೆಗಳಲ್ಲಿ ಬೇಸಿಗೆಯ ಸರಾಸರಿ ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ದಾಟುವುದು ಸಾಮಾನ್ಯವಾಗಿತ್ತು. ಕರಾವಳಿ ಮಲೆನಾಡಿನಲ್ಲಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಗರಿಷ್ಠ ವಾಡಿಗೆ ಉಷ್ಣಾಂಶ 32.7 ಡಿಗ್ರಿ ಸೆಲ್ಶಿಯಸ್ ಇದೆ. ಈ ಮಾಸಗಳ ಯಾವುದಾದರೂ ಒಂದು ದಿನ ಅಥವಾ ಎರಡು ದಿನ ಗರಿಷ್ಠ 37 ಡಿಗ್ರಿಯವರೆಗೆ ಉಷ್ಣಾಂಶ ಹೆಚ್ಚಿದ ಉದಾಹರಣೆ ಇದೆ. 2012 ರಿಂದ ಈಚೆಗೆ 38.06(2019 ರ ಮಾರ್ಚ್ 29 ರಂದು) ಡಿಗ್ರಿ ಸೆಲ್ಶಿಯಸ್ ಉತ್ತರ ಕನ್ನಡದಲ್ಲಿ ಮಾರ್ಚ್ ತಿಂಗಳ ಗರಿಷ್ಠ ಸರಾಸರಿ ಉಷ್ಣಾಂಶವಾಗಿದೆ.
ಆದರೆ, ಇದೇ ಮೊದಲ ಬಾರಿಗೆ ಈ ವರ್ಷ ಉತ್ತರ ಕನ್ನಡ ಜಿಲ್ಲೆಯ ಈ ವಾರದ ಸರಾಸರಿ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ ದಾಟಿದೆ. ಕೆಎಸ್‌ಎನ್‌ಡಿಎಂಸಿ ವರದಿಯಂತೆ ಫೆ.25 ರಿಂದಲೇ ಈ ರೀತಿಯ ಸೆಕೆ ಶುರುವಾಗಿದೆ. ಅಂದು ಕಾರವಾರದ ಸದಾಶಿವಗಡ ಹೋಬಳಿಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಎಂದರೆ 41.3 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿತ್ತು. ಅಲ್ಲಿಂದ ಇದುವರೆಗೂ ನಿರಂತರವಾಗಿ ಉಷ್ಣಾಂಶ ಹೆಚ್ಚಾಗಿಯೇ ಇದೆ. ಮಾರ್ಚ್ 3 ರ ವರದಿಯಂತೆ ಕಾರವಾರ ಘಾಡಸಾಯಿ ಹೋಬಳಿಯಲ್ಲಿ 41 ಡಿಗ್ರಿ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಒಟ್ಟು 6 ಸ್ಥಳಗಳಲ್ಲಿ 39 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ತಾಪಮಾನ ದಾಖಲಾಗಿತ್ತು. ಮಂಗಳವಾರವೂ ಇದೇ ಪರಿಸ್ಥಿತಿ ಮುಂದುವರಿದಿದೆ. ಜಿಲ್ಲೆಯ ಸರಾಸರಿ ತಾಪಮಾನ 40.1 ಡಿಗ್ರಿ ಸೆಲ್ಶಯಸ್ ಕಂಡುಬAದಿದೆ. ಜಿಲ್ಲೆಯ 10 ಸ್ಥಳಗಳಲ್ಲಿ ಭಾರಿ ಸೆಕೆ ದಾಖಲಾಗಿದೆ.
ವಿಶೇಷ ಎಂದರೆ ಸಂಪೂರ್ಣ ಕಾಡಿನಿಂದ ಆವೃತವಾಗಿರುವ ಜೊಯಿಡಾದ ಕುಂಬಾರವಾಡ, ಶಿರಸಿಯ ಹುಲೇಕಲ್, ಯಲ್ಲಾಪುರದ ಮಂಚಿಕೇರಿ, ದಾಂಡೇಲಿ ಮುಂತಾದೆಡೆ ಗರಿಷ್ಠ 38 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಿದೆ. ಹಳಿಯಾಳ ತಾಲೂಕಿನ ವಿವಿಧ ಹೋಬಳಿಗಳಲ್ಲಿ 39 ಡಿಗ್ರಿಗಿಂತ ಹೆಚ್ಚು ಸೆಕೆ ಇತ್ತು.