

ಸುಬ್ರಹ್ಮಣ್ಯ: ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮ ಪಂಚಾಯಿತಿ ಗ್ರಾಪಂ ವ್ಯಾಪ್ತಿಯ ಕೊಲ್ಲಮೊಗ್ರು-ಕಲ್ಮಕಾರು ಸಂಪರ್ಕ ರಸ್ತೆಯ ಗಡಿಕಲ್ಲು ಎಂಬಲ್ಲಿ ರಸ್ತೆ ಬದಿಯಲ್ಲಿ ಸಂಭವಿಸಿದ್ದ ಕುಸಿತಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಪರಿಹಾರ ಕಾರ್ಯ ನಡೆಸಲಾಗಿದ್ದು, ದೊಡ್ಡ ವಾಹನ ಸಂಚಾರ ಪುನರಾರಂಭಿಸಲಾಗಿದೆ.
ಗಡಿಕಲ್ಲು ಎಂಬಲ್ಲಿ ಮುಖ್ಯರಸ್ತೆಯಲ್ಲಿ ರಸ್ತೆಯ ಒಂದು ಬದಿ ಹೊಳೆ ಭಾಗದಿಂದ ಮಣ್ಣು ಕುಸಿತ ಸಂಭವಿಸಿ, ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿತ್ತು. ಪರಿಣಾಮ ದೊಡ್ಡ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಸದ್ಯ ಲೋಕೋಪಯೋಗಿ ಇಲಾಖೆ ವತಿಯಿಂದ ಕಲ್ಲು ತುಂಬಿಸಿ ಮಣ್ಣು ಕುಸಿಯದಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ರಸ್ತೆಯ ಇನ್ನೊಂದು ಬದಿಯಲ್ಲಿ ಮಣ್ಣು ತೆರವು ಮಾಡಿ ರಸ್ತೆ ಅಗಲೀಕರಣ ಮಾಡಿ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಶಾಶ್ವತ ಪರಿಹಾರವಾಗಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.