

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಕೃ.ರಾ. ಮಾರುಕಟ್ಟೆಯಲ್ಲಿನ ಚಟುವಟಿಕೆ ಗಳನ್ನು ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಲು ಸಂಸದ ತೇಜಸ್ವಿ ಸೂರ್ಯ ಸೂಚಿಸಿದ್ದಾರೆ.
ಕೃ.ರಾ.ಮಾರುಕಟ್ಟೆಯಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಶುಕ್ರವಾರ ಶಾಸಕ ಉದಯ ಗರುಡಾಚಾರ್, ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.
ಕೃ.ರಾ. ಮಾರುಕಟ್ಟೆಗೆ ನಿತ್ಯ ಸಾವಿರಾರು ಜನ ಬರುತ್ತಿದ್ದಾರೆ. ಅದರಿಂದ ನೂಕುನುಗ್ಗಲು ಉಂಟಾಗಿ, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತಿದೆ. ಹೀಗಾಗಿ ಮಾರುಕಟ್ಟೆಯನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ವ್ಯಾಪಾರ ನಡೆಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು. ನ್ಯಾಷನಲ್ ಕಾಲೇಜು ಮೈದಾನ, ಮೈಸೂರು ರಸ್ತೆ ಮೇಲ್ಸೇತುವೆ ಕೆಳಭಾಗದಲ್ಲಿನ ಮಸೀದಿ ಬಳಿ ಹಾಗೂ ಸಾರಕ್ಕಿ ಮಾರುಕಟ್ಟೆಯನ್ನು ಜರಗನಹಳ್ಳಿ ಮೈದಾನಕ್ಕೆ ಸ್ಥಳಾಂತರಿಸಬೇಕು. ಕರೊನಾ ಸೋಂಕು ಹರಡುವಿಕೆ 3ನೇ ಹಂತಕ್ಕೆ ತಲುಪಿದೆ. ಹೀಗಾಗಿ ಅಂತರ ಕಾಯ್ದು ಕೊಳ್ಳುವುದು ಅತ್ಯವಶ್ಯ ಎಂದು ತಿಳಿಸಿದರು.
ಬೆಂ. ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಸಾರ್ವಜನಿಕರ ಅನುಕೂಲಕ್ಕಾಗಿ ಟಾಸ್ಕ್ಫೋರ್ಸ್ ರಚಿಸಲಾಗಿದೆ. ಹಿರಿಯ ನಾಗರಿಕರು, ಆರ್ಥಿಕವಾಗಿ ಹಿಂದುಳಿದವರು, ವೈದ್ಯಕೀಯ ಸೇವೆ ಅಗತ್ಯವಿರುವವರು, ಗರ್ಭಿಣಿಯರು ತುರ್ತು ಸೇವೆಗಾಗಿ 99464 99464 ಸಹಾಯವಾಣಿಗೆ ಕರೆ ಮಾಡಬಹುದು. ಜನರಿಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ಉಂಟಾಗುವ ತೊಂದರೆ ನಿವಾರಿಸಲಾಗುವುದು. | ತೇಜಸ್ವಿ ಸೂರ್ಯ ಸಂಸದ https://www.vijayavani.net/coronavirus-covid-19-pandemic-home-quarantine-state-govt/