ಜೆ.ಪಿ.ನಡ್ಡಾ, ಅಮಿತ್​ ಮಾಳವಿಯಾಗೆ ತಾತ್ಕಾಲಿಕ ರಿಲೀಫ್​​​

High court logo
Published on

ಬೆಂಗಳೂರು: ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮುಸ್ಲಿಂಯೇತರ ಸಮುದಾಯದವರ ಸಂಪತ್ತು ದೋಚಿ ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ'ಎಂಬ ದ್ವೇಷ ಉತ್ತೇಜಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಬಿಜೆಪಿ ಐಟಿ ಕೋಶದ ಮುಖ್ಯಸ್ಥ ಅಮಿತ್​ ಮಾಳವಿಯಾಗೆ ತಾತ್ಕಾಲಿಕ ರಿಲೀಫ್​​​ ಸಿಕ್ಕಿದೆ.

ಆದರೆ, ಪ್ರಕರಣದ ತನಿಖೆ ಮುಂದುವರಿಸಲು ಪೊಲೀಸರಿಗೆ ಹಸಿರು ನಿಶಾನೆ ತೋರಿರುವ ನ್ಯಾಯಾಲಯ, ಅರ್ಜಿದಾರರನ್ನು ತನಿಖೆ,ವಿಚಾರಣೆಗೆ ಕರೆಸಬಾರದು ಹಾಗೂ ಅವರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸಬಾರದು ಎಂದು ನಿರ್ದೇಶಿಸಿದೆ. ಕಲಬುರಗಿ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುವ ಎಫ್​​​​ಐಆರ್​ ರದ್ದು ಕೋರಿ ನಡ್ಡಾ ಮತ್ತು ಮಾಳವಿಯಾ ಸಲ್ಲಿಸಿರುವಅರ್ಜಿ ಶುಕ್ರವಾರ ನ್ಯಾ. ಕೃಷ್ಣ ಎಸ್​.ದೀಕ್ಷಿತ್​ ಅವರಿದ್ದ ಏಕಸದಸ್ಯಪಿಠದ ಮುಂದೆ ವಿಚಾರಣೆಗೆ ಬಂದವು. ಕೆಲ ಕಾಲ ವಾದ&ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಈ ಮಧ್ಯಂತರ ಆದೇಶ ಹೊರಡಿಸಿ ವಿಚಾರಣೆಯನ್ನು ಮುಂದೂಡಿತು. ಪ್ರಕರಣದ ಮೂಲ ದೂರುದಾರರಾದ ಕಲಬುರಗಿಯ ಪ್ರವಿಣ್​ ಕುಮಾರ್​ ಪಾಟೀಲ್​ಗೆ ನೋಟಿಸ್​ ಜಾರಿಗೊಳಿಸಿದೆ.

ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಎಂ.ವಿನೋದ್​ ಕುಮಾರ್​, ಪ್ರಕರಣದಲ್ಲಿ ಅರ್ಜಿದಾರರ ಪಾತ್ರವೇನೂ ಇಲ್ಲ, ಒಬ್ಬರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಮೊತ್ತೊಬ್ಬರು ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥರು ಎನ್ನುವ ಕಾರಣಕ್ಕೆ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಪಕ್ಷದ ಪ್ರತಿಯೊಂದು ರಾಜ್ಯ ಟಕಗಳ ಸಾಮಾಜಿಕ ಮಾಧ್ಯಮ ಪೋಸ್ಟ್​ಗಳಲ್ಲಿ ರಾಷ್ಟ್ರೀಯ ನಾಯಕರ ಪಾತ್ರವಿರುವುದಿಲ್ಲ ಎಂದರು. ಅಲ್ಲದೆ, ರಾಜ್ಯ ಟಕಗಳ ಪೊಸ್ಟ್​ ಗಳಿಗೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಹೊಣೆ ಮಾಡುವುದು ಸರಿಯಲ್ಲ ಮತ್ತು ಅವರು ವಾಸ್ತವವಾಗಿ ಪ್ರತಿ ರಾಜ್ಯಗಳ ಟಕದ ಪೋಸ್ಟ್​ ಮೇಲೆ ನಿಗಾ ವಹಿಸಲಾಗದು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಎಸ್​ಪಿಪಿ ಬಿ.ಎನ್​.ಜಗದೀಶ್​, ಪೋಸ್ಟ್​ ಮಾಡಿದ್ದ ವಿಡಿಯೋ ತುಣುಕು ಆಧರಿಸಿ ತನಿಖೆ ನಡೆಸಲಾಗುತ್ತಿದೆ. ನ್ಯಾಯಾಲಯ ಯಾವುದೇ ಕಾರಣಕ್ಕೂ ತನಿಖೆಗೆ ತಡೆ ನೀಡಬಾರದು, ಆದರೆ ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದರು.ಅದನ್ನು ದಾಖಲಿಸಿಕೊಂಡ ನ್ಯಾಯಾಲಯ, ತನಿಖೆ ಮುಂದುವರಿಸಲು ಪೊಲೀಸರಿಗೆ ಅನುಮತಿ ನೀಡಿ, ಅರ್ಜಿದಾರರಿಗೆ ತನಿಖಾಕಾರಿ ಮುಂದೆ ಖುದ್ದು ಹಾಜರಿಗೆ ವಿನಾಯ್ತಿ ನೀಡಿತು.

ಪ್ರಕರಣದ ಹಿನ್ನೆಲೆ:

ಲೋಕಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್​ ನಾಯಕರೊಬ್ಬರು, ಮುಸ್ಲಿಂ ಅಕಾರಕ್ಕೆ ಬಂದರೆ ಮುಸ್ಲಿಂಯೇತರರ ಆಸ್ತಿ ಪಡೆದು ಅದನ್ನು ಮುಸ್ಲಿಂರಿಗೆ ಹಂಚಿಕೆ ಮಾಡಲಾಗುವುದು ಎಂದು ಹೇಳಿಕೆ ನೀಡಿದ್ದರು. ಅದನ್ನು ಆಧರಿಸಿ ಬಿಜೆಪಿ ಕರ್ನಾಟಕ ಒಂದು ಕೋಮಿನ ಬಗ್ಗೆ ದ್ವೇಷ ಭಾವನೆ ಬಿತ್ತುವಂತಹ ಸಂಭಾಷಣೆಯುಳ್ಳ ಒಂದು ಅನಿಮೇಟೆಡ್​ ವಿಡಿಯೋ ಸಿದ್ಧಪಡಿಸಿತ್ತು. ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡಲಾಗಿತ್ತು. ತೀವ್ರ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ ಆ ವಿಡಿಯೋ ಧರ್ಮ ಧರ್ಮಗಳ ನಡುವೆ ವೈಷಮ್ಯದ ಭಾವನೆ ಮೂಡಿಸುವಂತಿದೆ ಎಂದು ಕಲಬುರಗಿ ಜಿಲ್ಲೆಯ ಜೇವರ್ಗಿಯ ಪ್ರವಿಣ್​ ಕುಮಾರ್​ ಪಾಟೀಲ್​ ಅಲ್ಲಿನ ಸೆನ್​ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net