ಜಿಲ್ಲೆಯ 353 ರೌಡಿಗಳಿಗೆ ತಾತ್ಕಾಲಿಕ ಮುಕ್ತಿ

Rowdy Sheeter Parade
ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ರೌಡಿಶೀಟರ್‌ಗಳ ಪರೇಡ್ ನಡೆಸಿದರು. ಅನಿಲ್ ಕುಮಾರ್ ಭೂಮರಡ್ಡಿ, ಎ.ಜಿ.ಕಾರಿಯಪ್ಪ ಇದ್ದರು.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ಯಾವುದೇ ಪ್ರಕರಣ ದಾಖಲಾಗದ, ಉತ್ತಮ ನಡತೆ ಹೊಂದಿದ, ಮೃತಪಟ್ಟ ಹಾಗೂ ವಯಸ್ಸಿನ ಆಧಾರದ ಮೇಲೆ ಜಿಲ್ಲೆಯ 353 ರೌಡಿಶೀಟರ್‌ಗಳನ್ನು ಪೊಲೀಸ್ ಇಲಾಖೆ ತಾತ್ಕಲಿಕವಾಗಿ ರೌಡಿಪಟ್ಟಿಯಿಂದ ಮುಕ್ತಗೊಳಿಸಿದೆ.

ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಜಿಲ್ಲೆಯ ರೌಡಿಶೀಟರ್‌ಗಳ ಪರೇಡ್ ನಡೆಸಿದ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಶಿವಮೊಗ್ಗ ಎ-ಉಪ ವಿಭಾಗದಿಂದ 17, ಬಿ-ಉಪ ವಿಭಾಗದಿಂದ 60, ಭದ್ರಾವತಿ ಉಪ ವಿಭಾಗದಿಂದ 72, ಸಾಗರ ಉಪ ವಿಭಾಗದಿಂದ 55, ಶಿಕಾರಿಪುರ ಉಪ ವಿಭಾಗದ 124 ಹಾಗೂ ತೀರ್ಥಹಳ್ಳಿ ಉಪ ವಿಭಾಗದ 25 ಜನ ರೌಡಿಶೀಟರ್‌ಗಳನ್ನು ಪಟ್ಟಿಯಿಂದ ಬಿಡುಗಡೆಗೊಳಿಸಿರುವುದಾಗಿ ತಿಳಿಸಿದರು.

ಯಾವುದೋ ಕೆಟ್ಟ ಸಂದರ್ಭ ಹಾಗೂ ನಡವಳಿಕೆಗಳಿಂದ ಈ ಹಿಂದೆ ನಿಮ್ಮೆಲ್ಲರ ಮೇಲೆ ರೌಡಿಶೀಟರ್ ಪಟ್ಟಿ ತೆರೆಯಲಾಗಿತ್ತು. ಇತ್ತೀಚಿನ ದಿನಗಳಲ್ಲಿ ನಿಮ್ಮ ವಿರುದ್ಧ ಯಾವುದೇ ಪ್ರಕರಣ ದಾಖಲಾಗದೇ ಇರುವುದರಿಂದ ಹಾಗೂ ಕೆಲ ಮಾನದಂಡಗಳ ಆಧಾರದಲ್ಲಿ ಈ ಹಿಂದೆ ತೆರೆದಿದ್ದ ರೌಡಿಪಟ್ಟಿಯನ್ನು ತಾತ್ಕಾಲಿಕವಾಗಿ ಮುಕ್ತಾಯಗೊಳಿಸಿದ್ದೇವೆ ಎಂದರು.

ಸಮಾಜದಲ್ಲಿ ಎಲ್ಲ ನಾಗರಿಕರಂತೆ ನೀವೂ ಉತ್ತಮ ಜೀವನ ನಡೆಸಬೇಕು. ನಿಮ್ಮೆಲ್ಲರ ಮೇಲೂ ಪೊಲೀಸ್ ಇಲಾಖೆ ಸೂಕ್ಷ್ಮವಾಗಿ ಗಮನಹರಿಸಲಿದ್ದು, ಸಣ್ಣಪುಟ್ಟ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗಿಯಾದರೂ ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ ರೌಡಿ ಪಟ್ಟಿಯನ್ನು ಪುನಃ ತೆರೆಯಲಾಗುತ್ತದೆ. ಜತೆಗೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾತ್ಕಾಲಿಕವಾಗಿ ಮುಕ್ತಾಯ ಮಾಡಲಾದ ರೌಡಿಪಟ್ಟಿಯು ಪುನಃ ತೆರೆಯುವ ಸಂದರ್ಭ ಬಂದರೇ ಜೀವನ ಪರ್ಯಂತ ತೆರೆಯಲಾದ ರೌಡಿಪಟ್ಟಿಯು ಪ್ರಚಲಿತದಲ್ಲಿರುತ್ತದೆ. ಪೊಲೀಸ್ ಇಲಾಖೆ ನೇರ ಕಣ್ಗಾವಲಿನಲ್ಲಿ ನೀವಿರಲಿದ್ದು, ಕಾನೂನು ರೀತಿ ಕ್ರಮ ಎದುರಿಸಬೇಕಾಗುತ್ತದೆ. ಹಾಗಾಗಿ ಎಲ್ಲರೂ ಸನ್ನಡತೆಯಿಂದ ಜೀವನ ನಡೆಸಿ, ನಿಮ್ಮ ಸುತ್ತಮುತ್ತಲು ನಡೆಯುವ ಯಾವುದೇ ಘಟನೆಗಳ ಬಗ್ಗೆ ನಿಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಸಲಹೆ ನೀಡಿದರು. ಎಎಸ್‌ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಎ.ಜಿ.ಕಾರಿಯಪ್ಪ, ಶಿವಮೊಗ್ಗ ಜಿಲ್ಲೆಯ ಡಿವೈಎಸ್‌ಪಿಗಳು, ಸಿಪಿಐಗಳು, ಇನ್‌ಸ್ಪೆಕ್ಟರ್‌ಗಳು, ಪಿಎಸ್‌ಐಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net