ವಾಹನಗಳ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು

201-54916ge-transportation-led-lighting-traffic-gtx-housing-855x600
Published on


ವಿರಾಜಪೇಟೆ: ಗೌರಿ-ಗಣೇಶ ಮೂರ್ತಿಗಳ ವಿಸರ್ಜನೆ ಸಂಬಂಧ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಸೆ.17ರಂದು ಮಧ್ಯಾಹ್ನ 2 ರಿಂದ 18 ರ ಬೆಳಗ್ಗೆ 10 ಗಂಟೆವರೆಗೆ ಪಟ್ಟಣ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ವಾಹನಗಳ ಸಂಚಾರದಲ್ಲಿ ಮಾರ್ಪಾಡು ಮಾಡಿ ಜಿಲ್ಲಾಧಿಕಾರಿ ವೆಂಕಟ್‌ರಾಜಾ ಆದೇಶ ಹೊರಡಿಸಿದ್ದಾರೆ

ಪೆರಂಬಾಡಿ ಕಡೆಯಿಂದ ವಿರಾಜಪೇಟೆ ನಗರಕ್ಕೆ ಉತ್ಸವ ವೀಕ್ಷಣೆಗೆ ಬರುವ ವಾಹನಗಳನ್ನು ವಿರಾಜಪೇಟೆ ತಾಲೂಕು ಹಳೆಯ ತಹಸೀಲ್ದಾರ್ ಕಚೇರಿಯ ಮುಂಭಾಗದಿಂದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗದ ಬದಿಯಲ್ಲಿ ನಿಲ್ಲಿಸಬೇಕಿದೆ. ಕೇರಳದ ಮಾಕುಟ್ಟ ಮಾರ್ಗವಾಗಿ ಗೋಣಿಕೂಪ್ಪ ಅಥವಾ ಸಿದ್ದಾಪುರದ ಕಡೆಗೆ ಹೋಗುವ ವಾಹನಗಳು ಪೆರುಂಬಾಡಿ ಚೆಕ್ ಪೋಸ್ಟ್- ಬಾಳುಗೋಡು-ಬಿಟ್ಟಂಗಾಲ ಜಂಕ್ಷನ್-ಕೈಕೇರಿ ಜಂಕ್ಷನ್-ಸಿ.ಎಂ. ಪೂಣಚ್ಚ ಅವರ ಮನೆಯ ರಸ್ತೆ ಜಂಕ್ಷನ್ ಮಾರ್ಗವಾಗಿ ಪಾಲಿಬೆಟ್ಟ-ಸಿದ್ದಾಪುರಕ್ಕೆ ಹೋಗತಕ್ಕದ್ದು. ಅದೇ ರೀತಿ ಸಿದ್ದಾಪುರ ಕಡೆಯಿಂದ ಕೇರಳದ ಕಡೆ ಹೋಗುವ ವಾಹನಗಳು ಕೈಕೇರಿ- ಬಿಟ್ಟಂಗಾಲ- ಬಾಳುಗೋಡು - ಪೆರುಂಬಾಡಿ ಮಾರ್ಗವಾಗಿ ಕೇರಳ ಕಡೆ ಹೋಗಬೇಕಿದೆ.

ಮಡಿಕೇರಿಯಿಂದ ಕೇರಳದ ಕಡೆ ಹೋಗುವ ವಾಹನಗಳು ಸಿದ್ದಾಪುರ-ಪಾಲಿಬೆಟ್ಟ-ಕೈಕೇರಿ-ಬಿಟ್ಟಂಗಾಲ- ಬಾಳುಗೋಡು- ಪೆರುಂಬಾಡಿ-ಮಾಕುಟ್ಟ ಮಾರ್ಗವಾಗಿ ಹೋಗತಕ್ಕದ್ದು. ಮಡಿಕೇರಿ ಕಡೆಯಿಂದ ಮೈಸೂರು-ಬೆಂಗಳೂರಿಗೆ ಹೋಗುವ ವಾಹನಗಳು ಸಿದ್ದಾಪುರ ಮಾರ್ಗವಾಗಿ ಗೋಣೆಕೊಪ್ಪ-ಮೈಸೂರು, ಬೆಂಗಳೂರಿಗೆ ಹೋಗಬೇಕಿದೆ. ಸಿದ್ದಾಪುರ ಕಡೆಯಿಂದ ಮೆರವಣಿಗೆ ನೋಡಲು ವಿರಾಜಪೇಟೆಗೆ ಬರುವ ವಾಹನಗಳು ಮಗ್ಗುಲ ಜಂಕ್ಷನ್ (ಡೆಂಟಲ್ ಕಾಲೇಜ್ ಜಂಕ್ಷನ್) ಮತ್ತು ರವಿರಾಜ್ ಗ್ಯಾಸ್ ಏಜೆನ್ಸಿ ಕಚೇರಿಯಿಂದ ಐಮಂಗಲ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನಿಲ್ಲಿಸತಕ್ಕದ್ದು. ಗೋಣಿಕೂಪ್ಪ ಕಡೆಯಿಂದ ಮೆರವಣಿಗೆ ನೋಡಲು ಬರುವ ವಾಹನಗಳನ್ನು ಪಂಜರುಪೇಟೆಯ ಸರ್ವೋದಯ ಕಾಲೇಜಿನ ಬಳಿಯಿಂದ ಕಾವೇರಿ ಕಾಲೇಜು ಕಡೆಗೆ ಎಡಬದಿಯಲ್ಲಿ ಮಾತ್ರ ನಿಲುಗಡೆ ಮಾಡತಕ್ಕದ್ದು.

ಬೇಟೋಳಿ, ಗುಂಡಿಗೆರೆ, ಚಿಟ್ಟಡೆ ಕಡೆಯಿಂದ ಮಹಿಳಾ ಸಮಾಜ ಮಾರ್ಗವಾಗಿ ಮೆರವಣಿಗೆ ನೋಡಲು ಬರುವ ವಾಹನಗಳು ಮಹಿಳಾ ಸಮಾಜ ರಸ್ತೆಯ ಎಡಬದಿಯಲ್ಲಿ ನಿಲ್ಲಿಸತಕ್ಕದು. ಮೈಸೂರು-ಬೆಂಗಳೂರು ಕಡೆಯಿಂದ ಮಡಿಕೇರಿಗೆ ಹೋಗುವ ವಾಹನಗಳು ಗೋಣಿಕೊಪ್ಪ-ಸಿದ್ದಾಪುರ ಮಾರ್ಗವಾಗಿ ಮಡಿಕೇರಿ ಹೋಗಬೇಕು.

ಸೆ.17ರಂದು ಮಧ್ಯಾಹ್ನ 2 ರಿಂದ 18 ರ ಬೆಳಗ್ಗೆ 10 ಗಂಟೆವರೆಗೆ ವಿರಾಜಪೇಟೆ ನಗರದ ತೆಲುಗರ ಬೀದಿ, ದೊಡ್ಡಟ್ಟಿ ವೃತ್ತ, ಅಪ್ಪಯ್ಯ ಸ್ವಾಮಿ ರಸ್ತೆ, ದಖ್ಖನಿ ಮೊಹಲ್ಲಾ ರಸ್ತೆ, ಅರಸು ನಗರ ರಸ್ತೆ, ಎಫ್.ಎಂ.ಸಿ. ರಸ್ತೆ, ಗಡಿಯಾರ ಕಂಬ, ಮಲಬಾರ್ ರಸ್ತೆ, ಗೌರಿಕೆರೆ ರಸ್ತೆ, ಮೀನುಪೇಟೆ ರಸ್ತೆಯ ವಿರಾಜಪೇಟೆ ತಾಲೂಕು ಕಚೇರಿವರೆಗೆ ಹಾಗೂ ದೊಡ್ಡಟ್ಟಿ ವೃತ್ತದಿಂದ ಪಂಜರುಪೇಟೆ ಸರ್ವೋದಯ ಕಾಲೇಜುವರೆಗೆ ಹಾಗೂ ಮಗ್ಗುಲ ಜಂಕ್ಷನ್‌ನಿಂದ ದಖ್ಖನಿ ಮೊಹಲ್ಲಾ ಜಂಕ್ಷನ್‌ವರೆಗೆ ಎಲ್ಲ ರೀತಿಯ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net