

ಬೆಂಗಳೂರು: ಸ್ವಂತ ಮನೆ ನಿರ್ಮಿಸಲು ಬಿಲ್ಡಿಂಗ್ ಪ್ಲ್ಯಾನ್ ಪಡೆಯುವುದಕ್ಕೆ ನಾಗರಿಕರ ಅಲೆದಾಟ ತಪ್ಪಿಸಿ, ಕೇವಲ 24 ಗಂಟೆಯಲ್ಲಿ ತಾತ್ಕಾಲಿಕ ನಕ್ಷೆ ನೀಡುವ ‘ನಂಬಿಕೆ ನಕ್ಷೆ’ ವಿತರಿಸುವ ಕಾರ್ಯಕ್ರಮವನ್ನು ಬಿಬಿಎಂಪಿ ಮರು ಜಾರಿಗೊಳಿಸಿದೆ.
2024ರ ಮಾರ್ಚ್ ತಿಂಗಳಿನಿಂದ ‘ನಂಬಿಕೆ ನಕ್ಷೆ’ ಸೌಲಭ್ಯ ಒದಗಿಸಲು ಬಿಬಿಎಂಪಿ ಚಾಲನೆ ನೀಡಿದೆ. ಈ ಯೋಜನೆ ಅನ್ವಯ 375 ಚದರ ಮೀಟರ್ (4,000 ಅಡಿವರೆಗೆ) ವಿಸ್ತೀರ್ಣದ ವಸತಿ ಕಟ್ಟಡಗಳಿಗೆ (4 ಘಟಕಗಳಿಗೆ) ವಿಳಂಬ ಮಾಡದೆ ನಕ್ಷೆ ವಿತರಿಸಲಾಗುತ್ತದೆ. ತಾತ್ಕಾಲಿಕ ನಕ್ಷೆ ನೀಡಿದ ಬಳಿಕ ದಾಖಲೆಗಳನ್ನು ಪರಾಮರ್ಶಿಸಿ 15 ದಿನಗಳಲ್ಲಿ ಅನುಮೋದಿತ ನಕ್ಷೆ ವಿತರಿಸಲಾಗುತ್ತದೆ. ಪಾಲಿಕೆಯ ಯೋಜನರ ವಿಭಾಗದ ಅಧಿಕಾರಿಗಳು ಅರ್ಜಿ ಪರಿಶೀಲಿಸಿ ಅನುಮೋದನೆ ನೀಡಲಿದ್ದಾರೆ. ಇಂಥದ್ದೊಂದು ಜನಸ್ನೇಹಿ ಸೌಲಭ್ಯವನ್ನು ಪಾಲಿಕೆಯಿಂದ ಸಾರ್ವಜನಿಕರಿಗೆ ಲಭ್ಯವಾಗುತ್ತಿದೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದೆನಿಸಿರುವ ‘ನಂಬಿಕೆ ನಕ್ಷೆ’ ಸೂರು ನಿರ್ಮಿಸಿಕೊಳ್ಳುವ ಬಡ-ಮಧ್ಯಮ ವರ್ಗದವರಿಗೆ ವರದಾನವಾಗಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ಪಾರದರ್ಶಕ ರೀತಿಯಲ್ಲಿ ಯಾವುದೇ ಖರ್ಚಿಲ್ಲದೆ ಸೌಲಭ್ಯ ಸಿಗಲಿದೆ.
ಈ ಹಿಂದೆ ನಕ್ಷೆ ಪಡೆಯಲು ತಿಂಗಳುಗಟ್ಟಲೇ ಕಾಯಬೇಕಿತ್ತು. ಜತೆಗೆ ಲಂಚಕ್ಕೆ ಬೇಡಿಕೆ, ಶಿಫಾರಸು ಮಾಡಿಸುವಲ್ಲಿ ಜನರು ಹೈರಾಣರಾಗುತ್ತಿದ್ದರು. ಇದರಿಂದ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕಿದ್ದ ಪ್ರಕರಣಗಳೂ ನಡೆದಿದ್ದವು. ಈ ಸಮಸ್ಯೆಗೆ ಪರಿಹಾರ ಒದಗಿಸಲು ಡಿಸಿಎಂ ಕಡಿಮೆ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಯಾರೂ ಅಡ್ಡಿ ಮಾಡದ ರೀತಿ ಪ್ಲ್ಯಾನ್ ವಿತರಿಸಲು ಆನ್‌ಲೈನ್ ಸೌಲಭ್ಯಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಿದ್ದರು. ಈವರೆಗೆ 9 ಸಾವಿರ ಮಂದಿಗೆ ನಕ್ಷೆ ಸೌಲಭ್ಯ ವಿತರಿಸಲಾಗಿದೆ.
ತಂತ್ರಾಂಶ ಮೇಲ್ದೆರ್ಜೆ ಬಳಿಕ ಸರಾಗ:
ಹೊಸ ಮಾದರಿಯಲ್ಲಿ ನಕ್ಷೆ ನಿಡಲು ತಂತ್ರಾಂಶವನ್ನು ಅಭಿವೃದ್ಧಿಪಡಿಸಿದ್ದರೂ, ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದವು. ಇದರಿಂದ ಸರ್ಕಾರದ ಯೋಜನೆ ಅರ್ಹರಿಗೆ ಸಿಗದೆ ಸಮಸ್ಯೆ ಎದುರಾಗಿತ್ತು. ಇ-ಖಾತಾ ಕಡ್ಡಾಯ ಮಾಡಿದ್ದರಿಂದ ಸ್ವತ್ತುಗಳ ವಿವರಗಳನ್ನು ಸಾಫ್ಟ್ವೇರ್ಗೆ ಸಂಪರ್ಕಿಸಲು ಕೆಲ ದೋಷ ಕಾಣಿಸಿಕೊಂಡಿತ್ತು. ಇದನ್ನು ಸರಿಪಡಿಸಲು ಕೆಲ ತಿಂಗಳು ಹಿಡಿದ ಕಾರಣ ನಂಬಿಕೆ ನಕ್ಷೆ ವಿತರಣೆ ನಿಧಾನಗೊಂಡಿತ್ತು. ಇದೀಗ ತಂತ್ರಾಂಶವನ್ನು ಮೇಲ್ದೆರ್ಜೆಗೇರಿಸಿದ್ದು ತ್ವರಿತವಾಗಿ ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳಲು ಸೂರು ನಿರ್ಮಿಸಿಕೊಳ್ಳುವವರು ಪಾಲಿಕೆ ಕಚೇರಿಗೆ ಹೋಗದೆ ಮನೆಯಿಂದಲೇ ಅನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ನಕ್ಷೆ ಪಡೆದುಕೊಳ್ಳಬಹುದು. ಜತೆಗೆ ಪಾಲಿಕೆಯಿಂದ ಅನುಮೋದಿತ ಆರ್ಕಿಟೆಕ್ಟ್ ಅಥವಾ ಇಂಜಿನಿಯರ್‌ಗಳ ಮೂಲಕ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿ ನಂತರ ಸೌಲಭ್ಯ ಪಡೆಯಬಹುದಾಗಿದೆ.
ಯಾವ ದಾಖಲೆ ಅಗತ್ಯ:
ಸ್ವತ್ತಿನ ಇ-ಖಾತಾ, ಸೈಟ್ ಸ್ಥಳದ ಛಾಯಾಚಿತ್ರ, ಸ್ವತ್ತಿನ ವಿಸ್ತೀರ್ಣ.
ಸ್ವಯಂ ಪರಿಶೀಲನೆ:
ಪ್ರಸ್ತುತ ಎಲ್ಲ ಸ್ವತ್ತುಗಳಿಗೆ ಇ-ಖಾತಾ ಕಡ್ಡಾಯ ಮಾಡಲಾಗಿದೆ. ಇ-ಖಾತಾದಲ್ಲಿ ಸ್ವತ್ತಿನ ವಿವರ ಹಾಗೂ ಆಸ್ತಿದಾರರ ಮಾಹಿತಿ ಅಡಕವಾಗಿರುತ್ತದೆ. ಅಂದರೆ ಸ್ವತ್ತಿನ ಮಾಲಿಕತ್ವದ ಪತ್ರ, ಆಸ್ತಿಯ ಚಕ್ಕುಬಂದಿ, ಆಸ್ತಿತೆರಿಗೆ ಪಾವತಿ ರಶೀದಿ, ವಿಳಾಸದ ದೃಢೀಕರಣ ಪತ್ರ, ಆಧಾರ್ ಕಾರ್ಡ್ ಮಾಹಿತಿಯನ್ನು ಪರಿಶೀಲನಾ ಅಧಿಕಾರಿಗಳು ಪರಾಮರ್ಶೆ ನಡೆಸಿ ಅರ್ಜಿಯನ್ನು ಅನುಮೋದಿಸಿಕೊಡಲಾಗುತ್ತದೆ.