ಹಳೇ ಕಟ್ಟಡದಲ್ಲಿ ತಾತ್ಕಾಲಿಕ ನೆಲೆ

kapu tp
Published on

ಹೇಮನಾಥ್ ಪಡುಬಿದ್ರಿ

ಉಡುಪಿಯಿಂದ ಪ್ರತ್ಯೇಕಗೊಂಡು 12 ತಾಲೂಕು ಪಂಚಾಯಿತಿ ಸ್ಥಾನಗಳೊಂದಿಗೆ 2020 ಮೇ 21ಕ್ಕೆ ಅಸ್ತಿತ್ವಕ್ಕೆ ಬಂದಿರುವ ಕಾಪು ತಾಪಂ ಕಾರ್ಯಾಲಯ 5 ವರ್ಷಗಳಲ್ಲಿ 3ನೇ ಬಾರಿಗೆ ಮತ್ತೆ ಸ್ಥಳಾಂತರಗೊಂಡಿದೆ. 6 ತಿಂಗಳು ಮಾತ್ರ ಜನಪ್ರತಿನಿಧಿಗಳ ಆಡಳಿತ ಕಂಡಿರುವ ತಾಪಂಗೆ ಸಾರ್ವತ್ರಿಕ ಚುನಾವಣೆ ನಡೆಯದೆ 5 ವರ್ಷಗಳಲ್ಲಿ 3 ಆಡಳಿತಾಧಿಕಾರಿಗಳು ಆಡಳಿತ ನಡೆಸಿರುವುದು ಇತಿಹಾಸ.

ಉಡುಪಿ ತಾಪಂಗೆ 2015-16ರಲ್ಲಿ ಸದಸ್ಯರಾಗಿ ಚುನಾಯಿತರಾಗಿದ್ದ ಕಾಪು ಭಾಗದ ಬೆಳ್ಳೆ, ಶಿರ್ವ, ಶಂಕರಪುರ, ಕಟಪಾಡಿ, ಕೋಟೆ, 108 ಕಳತ್ತೂರು, ಮುದರಂಗಡಿ, ಉಚ್ಚಿಲ, ಎಲ್ಲೂರು, ಪಲಿಮಾರು, ಹೆಜಮಾಡಿ, ಪಡುಬಿದ್ರಿ ಕ್ಷೇತ್ರದ 12 ಸದಸ್ಯರನ್ನು ಪ್ರತ್ಯೇಕಿಸಿ ಕಾಪು ತಾಪಂ ರೂಪುಗೊಳಿಸಲಾಗಿತ್ತು. ಅವರ ಸದಸ್ಯತ್ವದ ಕೊನೇ ತಿಂಗಳ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದು ಕಿರು ಅವಧಿಯಲ್ಲಿ ಜನಪ್ರತಿನಿಧಿಗಳ ಆಡಳಿತಕಂಡಿತು.

ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಣೆ

ಆರಂಭದಲ್ಲಿ ಕಾಪು ಪುರಸಭೆಗೆ ಸೇರಿದ ಉಳಿಯಾರಗೋಳಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಲಯ ಆರಂಭಿಸಿತ್ತು. ಕೆಲ ವರ್ಷ ಅಲ್ಲಿ ಕಾರ್ಯಾಚರಿಸಿದ್ದ ಕಚೇರಿ ಬಳಿಕ ಕಾಪು ತಾಲೂಕು ಆಡಳಿತ ಸೌಧದಲ್ಲಿ ಕಾರ್ಯಾಲಯ ತೆರೆಯಿತು. ಇದೀಗ ಮತ್ತೆ ಕಾಪು ಬಂಗ್ಲೆ ಮೈದಾನ ಬಳಿಯ ಪುರಸಭೆ ಹಳೇ ಕಚೇರಿ ಕಟ್ಟಡದ ಮೊದಲ ಮಹಡಿಗೆ ಸ್ಥಳಾಂತರಗೊಂಡಿದ್ದರೂ, ಇಲ್ಲಿಯೂ ಬಾಡಿಗೆ ನೀಡಿಯೇ ಕಾರ್ಯಾಲಯ ಕಾರ್ಯಾಚರಿಸುವಂತಾಗಿದೆ.

ಸಿಬ್ಬಂದಿ ನೇಮಕ

ತಾಪಂಗೆ 14 ಹುದ್ದೆ ಮಂಜೂರಾದರೂ, ಓರ್ವ ಸಹಾಯಕ ನಿರ್ದೇಶಕರು ಮತ್ತು ಸಹಾಯಕ ಲೆಕ್ಕಾಧಿಕಾರಿ ಸೇರಿ 2 ಹುದ್ದೆ ಭರ್ತಿಯಾಗಿದ್ದು, ಇನ್ನುಳಿದ ಹುದ್ದೆಗಳಲ್ಲಿ ಗ್ರಾಪಂ 3 ಕಾರ್ಯದರ್ಶಿಗಳು ಕಾರ್ಯನಿರ್ವಹಿಸುತ್ತಾರೆ. ಬಾಕಿ ಹುದ್ದೆಗಳಿಗೆ ನೇಮಕವಾಗಿಲ್ಲದಿದ್ದರೂ, ಹೊರಗುತ್ತಿಗೆಯಲ್ಲಿ ಸಿಬ್ಬಂದಿ ನೇಮಿಸಿ ಕೆಲಸ ಮಾಡಲಾಗುತ್ತಿದೆ.

ಇಒ ಹುದ್ದೆ ಖಾಲಿ

ನಾಲ್ಕು ವರ್ಷಗಳಲ್ಲಿ 2 ಪ್ರಭಾರ, 3 ಹೆಚ್ಚುವರಿ ಪ್ರಭಾರ ಹಾಗೂ 3 ಜನ ವರ್ಗಾವಣೆಗೊಂಡು ಕಾರ್ಯನಿರ್ವಾಹಕ ಹುದ್ದೆ ನಿರ್ವಹಿಸಿದರೂ, ಯಾರೊಬ್ಬರೂ ಪೂರ್ಣಕಾಲಿಕವಾಗಿ ಇಲ್ಲಿ ಕರ್ತವ್ಯ ನಿರ್ವಹಿಸಿದ್ದಿಲ್ಲ. ಆರಂಭದಲ್ಲಿ 7 ತಿಂಗಳು ವಿವೇಕಾನಂದ ಗಾಂವ್ಕರ್(ಪ್ರಭಾರ), ಟಿಎಸ್ ಸತೀಶ್ 2 ತಿಂಗಳು, ಶಿವಪ್ರಕಾಶ್ ಎಸ್. 5 ತಿಂಗಳು, ಶಶಿಧರ್ ಕೆಜಿ (2 ಅಲ್ಪ ಅವಧಿ)ಯಲ್ಲಿ 6 ತಿಂಗಳು ಹೆಚ್ಚುವರಿ ಪ್ರಭಾರ, ನವೀನ್‌ಕುಮಾರ್ ಎಚ್.ಡಿ. (7 ತಿಂಗಳು), ವಿಜಯಾ ಹೆಚ್ಚುವರಿ ಪ್ರಭಾರ 4 ತಿಂಗಳು, ಸಹಾಯಕ ನಿರ್ದೇಶಕ ಜೇಮ್ಸ್ ಡಿಸಿಲ್ವ ಒಮ್ಮೆ 4 ತಿಂಗಳು. ವಿಧಾನಸಭಾ ಚುನಾವಣೆ ಸಮಯದಲ್ಲಿ ಎಲ್. ಮೋಹನ್‌ಕುಮಾರ್ ಬಳಿಕ ಮತ್ತೆ ಜೇಮ್ಸ್ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಅನಿರ್ಬಂಧಿತ ನಿಧಿ ಬಳಕೆ

ಹನ್ನೆರಡು ಸದಸ್ಯ ಬಲದ ತಾಪಂ ಪ್ರಸ್ತುತ ಕ್ಷೇತ್ರ ಪುನಃವಿಂಗಡನೆಗೊಂಡಿದೆ. ಈ ಹಿಂದೆ ಇದ್ದ ಮುದರಂಗಡಿ ತಾಪಂ ಕ್ಷೇತ್ರ ರದ್ದಾಗಿದ್ದು, ಹೊಸದಾಗಿ ತೆಂಕ ಕ್ಷೇತ್ರ ಉದಯವಾಗಿದೆ. ಮುದರಂಗಡಿ ಕ್ಷೇತ್ರದಲ್ಲಿದ್ದ ಪಿಲಾರು ಎಲ್ಲೂರಿಗೆ, ಸಾಂತೂರು ಪಲಿಮಾರಿಗೆ, ಪಲಿಮಾರು ಕ್ಷೇತ್ರದಲ್ಲಿದ್ದ ಪಾದೆಬೆಟ್ಟು ತೆಂಕ ಕ್ಷೇತ್ರ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಪ್ರಸ್ತುತ ಜನಪ್ರತಿನಿಧಿಗಳ ಆಡಳಿತವಿಲ್ಲದೆ 15ನೇ ಹಣಕಾಸು ಅನುದಾನಕ್ಕೆ ಕತ್ತರಿ ಬಿದ್ದಿದೆ, ಕೇವಲ ಅನಿರ್ಬಂಧಿತ ನಿಧಿ ಮಾತ್ರ ತಾಪಂ ಬಳಕೆ ಮಾಡುವಂತಾಗಿದೆ. ಒಟ್ಟಿನಲ್ಲಿ 2025ನೇ ವರ್ಷದಲ್ಲಾದರೂ ಚುನಾವಣೆ ನಡೆದು ಜನಪ್ರತಿನಿಧಿಗಳ ಆಡಳಿತ ಬರಬಹುದೇ ಎನ್ನುವ ನಿರೀಕ್ಷೆ ಮತದಾರರದು.

ಜಿಲ್ಲಾಧಿಕಾರಿ ಆದೇಶದಂತೆ ಕಾಪು ಪುರಸಭೆ ಹಳೇ ಕಟ್ಟಡದಲ್ಲಿ ತಾತ್ಕಾಲಿಕ ನೆಲೆಯಲ್ಲಿ ತಾಪಂ ಕಾರ್ಯಾಲಯ ಆರಂಭಿಸಲಾಗಿದೆ. ಕಾಪು ಬಂಗ್ಲೆ ಆವರಣದ ತಾಲೂಕು ಆಡಳಿತ ಸೌಧ ಪಾರ್ಶ್ವದಲ್ಲಿ ತಾಪಂಗೆ 30 ಸೆಂಟ್ಸ್ ಜಮೀನು ಮಂಜೂರಾಗಿದ್ದು, ಅಂದಾಜು ಪಟ್ಟಿ ತಯಾರಿಸಿ ಕಟ್ಟಡ ನಿರ್ಮಾಣ ಮಾಡುವ ಯೋಜನೆ ಹಾಕಿಕೊಳ್ಳಲಾಗುತ್ತಿದೆ. -ಜೇಮ್ಸ್ ಡಿಸಿಲ್ವ ಪ್ರಭಾರ ಇಒ ಕಾಪು ತಾಪಂ https://www.vijayavani.net/there-should-be-respect-and-pride-in-ones-profession https://www.vijayavani.net/brahmin-organization-is-strong-across-the-country

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net