

ಮೂಡಿಗೆರೆ: ತಾಲೂಕಿನ ಪ್ರಸಿದ್ಧ ಪ್ರಾಕೃತಿಕ ತಾಣ ಎತ್ತಿನಭುಜ ಚಾರಣ ತೆರಳುವುದಕ್ಕೆ ಅರಣ್ಯ ಇಲಾಖೆಯಿಂದ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಜಿಲ್ಲಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶದಂತೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ ನಿಷೇಧ ವಿಧಿಸಿದ್ದಾರೆ.
ಎತ್ತಿನಭುಜ ವ್ಯಾಪ್ತಿಯಲ್ಲಿ ಕೆಲ ದಿನದಿಂದ ಅತಿಯಾದ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಅಲ್ಲಲ್ಲಿ ಗುಡ್ಡ ಕುಸಿತ, ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ವಿದ್ಯುತ್ ಕಂಬಗಳು ಬಿದ್ದು ಚಾರಣಿಗರಿಗೆ ತೊಂದರೆಯಾಗುತ್ತಿದೆ. ರಾಜ್ಯದ ವಿವಿಧೆಡೆಯಿಂದ ಪ್ರತಿ ದಿನ ನೂರಾರು ಮಂದಿ ಚಾರಣಕ್ಕೆಂದು ಎತ್ತಿನಭುಜ ಅರಣ್ಯಕ್ಕೆ ಪ್ರವೇಶಿಸುತ್ತಾರೆ. ಅಲ್ಲಲ್ಲಿ ಫೋಟೋ ತೆಗೆಯುವ ಸಂದರ್ಭದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಚಾರಣಕ್ಕೆ ತೆರಳಿದ ಪ್ರವಾಸಿಗರಿಗೆ ಅರಣ್ಯದ ಮಧ್ಯೆ ಅಪಾಯ ಎದುರಾದಲ್ಲಿ ದುರ್ಗಮ ಅರಣ್ಯದಲ್ಲಿ ಇಲಾಖೆ ಸಿಬ್ಬಂದಿ ತಕ್ಷಣ ತೆರಳಲು ಕಷ್ಟಸಾಧ್ಯ. ಪ್ರಾಣ ಹಾನಿ ಅಥವಾ ಅಪಾಯ ತಡೆಗಟ್ಟುವ ದೃಷ್ಟಿಯಿಂದ ಚಾರಣ ನಿಷೇಧಿಸಲಾಗಿದೆ ಎಂದು ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮೋಹನ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.