

ಬಂಟ್ವಾಳ: ಸ್ವಾತಂತ್ರೃಪೂರ್ವದಲ್ಲಿ ಬ್ರಿಟಿಷರು ನಿರ್ಮಿಸಿದ 110 ವರ್ಷಹಿಂದಿನ ಪಾಣೆಮಂಗಳೂರಿನ ಉಕ್ಕಿನ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸುವ ಉದ್ದೇಶದಿಂದ ಸೇತುವೆಯ ಎರಡೂ ಬದಿಯಲ್ಲೂ ಕಬ್ಬಿಣದ ತಡೆಬೇಲಿ ಅಳವಡಿಸಿದ್ದರೂ ಕೆಲವೊಂದು ವಾಹನಗಳು ತಡೆಬೇಲಿಯಲ್ಲೂ ನುಗ್ಗಿಸಿಕೊಂಡು ಹೋಗಲು ಪ್ರಯತ್ನಿಸಿ ಅರ್ಧದಲ್ಲೇ ಸಿಲುಕಿಕೊಳ್ಳುತ್ತಿರುವ ಘಟನೆ ಮರುಕಳಿಸುತ್ತಿದೆ.
ಅನೇಕ ಪಿಕಪ್, ಟೆಂಪೋ ಮತ್ತಿತರ ಗೂಡ್ಸ್ ವಾಹನಗಳು ಈ ತಡೆಬೇಲಿಯಲ್ಲಿ ಸಿಲುಕಿಕೊಂಡು ಆ ವಾಹನದೊಂದಿಗೆ ಇತರ ವಾಹನಗಳು ಪರಿತಪಿಸಿದ ಘಟನೆ ಈ ಸೇತುವೆಯಲ್ಲಿ ಹಲವು ಬಾರಿ ನಡೆದಿದೆ. ಶನಿವಾರ ಬೆಳಗ್ಗೆ ಗೂಡ್ಸ್ ಟೆಂಪೊ ತಡೆಬೇಲಿಯಲ್ಲಿ ನುಗ್ಗಲು ಪ್ರಯತ್ನಿಸಿ ಅಲ್ಲೇ ಸಿಲುಕಿಕೊಂಡು ಕೊನೆಗೆ ಕ್ರೇನ್ ಮೂಲಕ ತೆಗೆಯಬೇಕಾಯಿತು. ಇದರಿಂದಾಗಿ ವಾಹನ ನಜ್ಜುಗುಜ್ಜಾಗಿದೆ. ಇತರ ವಾಹನಗಳ ಸಂಚಾರಕ್ಕೂ ತೊಂದರೆಯಾಯಿತು. ಶಾಲೆ ವಾಹನಗಳು ಸಿಲುಕಿ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಶಾಲೆ ತಲುಪಲು ಸಾಧ್ಯವಾಗದೆ ಪರದಾಡಬೇಕಾಯಿತು. ತಡೆಬೇಲಿಯೂ ಹಾನಿಗೀಡಾಗಿ ದೊಡ್ಡ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.
ಕೆಲವು ಸಮಯದ ಹಿಂದೆ ಪಾಣೆಮಂಗಳೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಸುದ್ದಿಯೊಂದು ಹರಿದಾಡಿದ ಪರಿಣಾಮ ಸೇತುವೆಯನ್ನು ಸಂರಕ್ಷಿಸುವ ಉದ್ದೇಶದಿಂದ ಬಂಟ್ವಾಳ ಪುರಸಭೆ ಎರಡೂ ಪಾರ್ಶದಲ್ಲೂ ಕಬ್ಬಿಣದ ತಡೆಬೇಲಿ ನಿರ್ಮಿಸಿತ್ತು. ಆ ತಡೆಬೇಲಿ ಎರಡೇ ದಿನದಲ್ಲಿ ಬುಡ ಸಮೇತ ಕಿತ್ತು ಹೋಗಿ ಆ ಬಳಿಕ ಬಳಿಕ 6.5 ಅಡಿ ಎತ್ತರಕ್ಕೆ ಮತ್ತೆ ತಡೆಬೇಲಿ ನಿರ್ಮಿಸಲಾಗಿದೆ. ಪಾಣೆಮಂಗಳೂರಿಗೆ ಸರಕುಗಳನ್ನು ಸಾಗಿಸುವ ಗೂಡ್ಸ್ ವಾಹನಗಳ ಚಾಲಕರು ಇದು ಸುಲಭದ ದಾರಿಯೆಂದು ಈ ಸೇತುವೆಯ ಮೂಲಕ ತಡಬೇಲಿಯನ್ನು ನುಗ್ಗಿ ಸಂಚರಿಸುವ ಪ್ರಯತ್ನ ಮಾಡುತ್ತಾರೆ. ಇದರಿಂದ ತಡೆಬೇಲಿ ಹಿಗ್ಗಿ ಹೋಗಿದೆ. ಇದು ದೊಡ್ಡ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಟ್ಟಂತಾಗಿದೆ.
ಪಾಣೆಮಂಗಳೂರು ಉಕ್ಕಿನ ಸೇತುವೆಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧಿಸಿ ತಡೆಬೇಲಿ ಹಾಕಿದ್ದರೂ ನಿಯಮ ಉಲ್ಲಂಘಿಸಿ ತಡೆಬೇಲಿಯೊಳಗೆ ನುಗ್ಗಿ ಹೋಗುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿವೆ. ನಿಯಮ ಉಲ್ಲಂಘಿಸುವ ಇಂತಹ ವಾಹನಗಳಿಗೆ ದಂಡ ವಿಧಿಸುವುದಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ತಕ್ಷಣ ಸಂಬಂದಪಟ್ಟ ಇಲಾಖೆ ದುರಸ್ತಿ ಪಡಿಸಿ ಸೇತುವೆಯ ರಕ್ಷಣೆ ಹಿತದೃಷ್ಟಿಯಿಂದ ಗುಣಮಟ್ಟದ ತಡೆಬೇಲಿಯನ್ನು ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.