

ಮಳವಳ್ಳಿ: ತಾಲೂಕಿನ ಸಂಶೆಟ್ಟಿಪುರ ಗ್ರಾಮದಲ್ಲಿ ಫೆ. 18 ರಿಂದ 21 ರ ವರೆಗೆ ವಿವಿಧ ದೇವಾಲಯ ಲೋಕಾರ್ಪಣೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನ, ಬಸವದ್ವಾರ, ಅಶ್ವತ್ಥ ಕಟ್ಟೆ ಲೋಕಾರ್ಪಣೆ, ಸುಬ್ರಮಣ್ಯಸ್ವಾಮಿ ಹಾಗೂ ಮಲೈಮಹದೇಶ್ವರ ಕಂಚಿನ ಹುಲಿವಾಹನ ಸಂಪ್ರೋಕ್ಷಣಾ ಕಾರ್ಯಕ್ರಮದ ಅಂಗವಾಗಿ 18ರ ಸಂಜೆ 4ಕ್ಕೆ ಹಾಲರವಿ, ಅಗ್ರೋದಕ ಗೋಪೂಜೆ, ನೂತನ ವಿಗ್ರಹ ಮತ್ತು ಗ್ರಾಮ ದಿಗ್ಬಂಧನ ಶಿಲೆಗಳ ಪೂಜೆ ನೆರವೇರಲಿದೆ. 19 ರಂದು ದೇವಸ್ಥಾನದಲ್ಲಿ ವಿವಿಧ ಹೋಮ, ನೂತನ ಶಿವಲಿಂಗ ಹಾಗೂ ವಿಗ್ರಹಗಳಿಗೆ ರುದ್ರ ಪಾರಾಯಣ ಸಹಿತ ಜಲ, ಕ್ಷೀರಾಧಿವಾಸ ನೆರವೇರಲಿದೆ. 20 ರಂದು ಗರ್ಭಗುಡಿಯಲ್ಲಿ ಲಿಂಗ ಹಾಗೂ ಆವರಣದಲ್ಲಿ ಸುಬ್ರಮಣ್ಯಸ್ವಾಮಿ, ಗೋಪುರದ ಕಳಶ ಪ್ರತಿಷ್ಠಾಪನೆ
ವಿಧಿಗಳು ನಡೆಯಲಿವೆ. 21 ರಂದು ಬೆಳಗ್ಗೆ 10ಕ್ಕೆ ಧರ್ಮ ಸಭೆಯಲ್ಲಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಭಕ್ತರು ಭಾಗವಹಿಸಬೇಕು ಎಂದು ದೇವಾಲಯ ಸೇವಾ ಸಮಿತಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ.