

ತೆಲಸಂಗ: ಹಬ್ಬ ಮತ್ತು ಜಾತ್ರೆಗಳು ನಮ್ಮ ಸಂಸ್ಕೃತಿ ಪ್ರತೀಕ. ದೇವಸ್ಥಾನಗಳು ಪವಿತ್ರ ಶ್ರದ್ಧಾ ಕೇಂದ್ರಗಳಾಗಿದ್ದು, ಅವುಗಳ ಉಳಿವು ಮತ್ತು ಬೆಳವಣಿಗೆಗೆ ಶ್ರಮಿಸಬೇಕು ಎಂದು ಮಾಜಿ ಶಾಸಕ ಶಹಜಹಾನ್ ಡೊಂಗರಗಾಂವ ಹೇಳಿದರು.
ಗ್ರಾಮದಲ್ಲಿ ಗುರುವಾರ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿ, ದೇವಾಲಯ ಕೇವಲ ಪೂಜೆ ಸ್ಥಳವಲ್ಲ ಅದು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಆಧ್ಯಾತ್ಮಿಕ ಶಕ್ತಿ, ನೆಮ್ಮದಿ ದೊರೆಯುತ್ತದೆ. ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ಕೆ ನಾವು ಸದಾ ಸಿದ್ಧ ಎಂದರು.
ಮಾಜಿ ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ದೇವಾಲಯದ ಜೀರ್ಣೋದ್ಧಾರ ಕಾರ್ಯ ನಮ್ಮ ಪವಿತ್ರತೆಯ ಪುನರುತ್ಥಾನ. ಸಮಾನ ಮನಸ್ಕರು ಕೈಜೋಡಿಸಿದರೆ ಈ ಕ್ಷೇತ್ರವು ಇನ್ನಷ್ಟು ಬೆಳೆಯುತ್ತದೆ ಎಂದು ತಿಳಿಸಿದರು.
ಮುಖಂಡ ಗಜಾನನ ಮಂಗಸೂಳಿ ಮಾತನಾಡಿ, ಅಥಣಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಿದ್ಧಾರ್ಥ ಸಿಂಘೆ, ಭಾಜಪ ಮುಖಂಡ ಮುತ್ತಯ್ಯ ಕಾಡದೇವರಮಠ, ಜಿಪಂ ಮಾಜಿ ಸದಸ್ಯ ಸಿದ್ದಪ್ಪ ಮುದಕಣ್ಣವರ ಮಾತನಾಡಿ, ಪ್ರವಾಸಿ ಮಂದಿರ, ಕಲ್ಯಾಣ ಮಂಟಪ, ಶೌಚಗೃಹ, ಶುದ್ಧ ನೀರು ಮತ್ತು ಸ್ವಚ್ಛ ವಾತಾವರಣ ಇವೆಲ್ಲವೂ ದೇವಾಲಯದ ಸೇವೆಯ ಭಾಗವೇ ಆಗಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಭಾರತಾ ಲೋಕಂಡೆ, ಉಪಾಧ್ಯಕ್ಷೆ ಅನಿತಾ ಕಂದಾರೆ, ಭಾಜಪ ಮಂಡಲ ಅಧ್ಯಕ್ಷ ಗಿರೀಶ ಬುಟಾಳಿ, ಅಪ್ಪಾಸಾಹೇಬ ಅವತಾಡೆ, ಬಸವರಾಜ ಬುಟಾಳಿ, ಶಿವು ಸಿಂಧೂರ ಇತರರಿದ್ದರು.
ಪಲ್ಲಕ್ಕಿ ಸ್ವಾಗತ: ವಾಡಿಕೆಯಂತೆ ಗ್ರಾಮದ ಮೆಣಸಂಗಿಯವರ ಮನೆಯಲ್ಲಿ ಯಲ್ಲಮ್ಮದೇವಿ ಪಲ್ಲಕ್ಕಿ ತಂಗಿತ್ತು. ಬೆಳಗ್ಗೆ ದೇವಿಗೆ ಸುಮಂಗಲೆಯರಿಂದ ಉಡಿ ತುಂಬುವುದು, ಅಭಿಷೇಕ, ವಿಶೇಷ ಪೂಜೆ ನಡೆಯಿತು. ಬಳಿಕ ಗ್ರಾಮದ ಮುಖ್ಯ ಮಾರುಕಟ್ಟೆ ಮೂಲಕ ಉತ್ಸವ ಸಾಗಿ ಗುಡ್ಡದಲ್ಲಿನ ದೇವಸ್ಥಾನ ತಲುಪಿತು. ಜಾನಪದ ಕುಣಿತ ತಂಡ ಉತ್ಸವದ ಮೆರಗು ಹೆಚ್ಚಿಸಿತು.