

ಬ್ಯಾಡಗಿ: ದೇವಸ್ಥಾನ ನಿರ್ಮಾಣ ಮಾಡುವ ಸಂಕಲ್ಪದ ಹಿಂದೆ ಉತ್ತಮ ಧ್ಯೇಯವಿದ್ದು, ಭಾವನಾತ್ಮಕ ಸಂಬಂಧ ಹಾಗೂ ಭಾವೈಕ್ಯವನ್ನು ಹೆಚ್ಚಿಸಲು ಪ್ರಮುಖವಾಗಲಿದೆ ಎಂದು ರಟ್ಟಿಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶ್ರೀಗಳು ಹೇಳಿದರು.
ತಾಲೂಕಿನ ಮಲ್ಲೂರ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್ದ ಭದ್ರಕಾಳಮ್ಮ ದೇವಾಲಯ ಉದ್ಘಾಟನೆ ಮತ್ತು ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇವಾಲಯಗಳು ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳ ಭಂಡಾರವಾಗಿದೆ. ಧರ್ಮವನ್ನು ಅನುಸರಿಸುವ ಪ್ರತಿಯೊಬ್ಬ ವ್ಯಕ್ತಿಯೂ ದೇವಾಲಯಗಳ ಬಗ್ಗೆ ವಿಶೇಷ ಕಾಳಜಿ ಹೊಂದಿರುತ್ತಾನೆ. ಆದರೆ, ಧರ್ಮದ ಮೌಲ್ಯಗಳನ್ನು ಪರಿಪಾಲಿಸಿದರೆ ಮಾತ್ರ ಧರ್ಮವು ನಮ್ಮನ್ನು ಕಾಪಾಡುತ್ತದೆ. ಆಧುನಿಕ ಜಗತ್ತಿನ ಯುವಪೀಳಿಗೆ ಇದಕ್ಕೆ ಪೂರಕವಾಗಿ ನಡೆದುಕೊಳ್ಳಬೇಕು ಎಂದರು.
ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಭೌತಿಕ ಸಂಪತ್ತು ಶಾಶ್ವತವಲ್ಲ, ಹುಟ್ಟಿರುವ ಬದುಕು ಶಾಶ್ವತವಲ್ಲ, ಆದರೆ, ಸಂಸ್ಕಾರ, ಸಂಸ್ಕೃತಿಯಿಂದ ಮಾತ್ರ ಮನುಷ್ಯನ ಜೀವನ ಉನ್ನತಿ ಹೊಂದಲು ಸಾಧ್ಯ. ಸನ್ಮಾರ್ಗದ ಜೀವನ, ಪುಣ್ಯ ಪರೋಪಕಾರಗಳು ಮನುಷ್ಯರಿಗೆ ಜನ್ಮ ಜನ್ಮಾಂತರದಲ್ಲಿ ಪುಣ್ಯದ ಫಲ ತಂದುಕೊಡಲಿವೆ. ದೇವರ ಮೇಲಿನ ನಂಬಿಕೆಯೂ ಒಂದು ಶಕ್ತಿಯಾಗಿದೆ. ಕೇವಲ ದೇವಸ್ಥಾನ ನಿರ್ವಿುಸಬೇಡಿ, ಅಲ್ಲಿ ಧರ್ಮಕ್ಕೆ ಪೂರಕ ವಾತಾವರಣ ಕಾಣಬೇಕು. ನಿತ್ಯ ಆರಾಧನೆ ನಡೆಯಬೇಕು ಎಂದರು.
ಕೂಡಲದ ಷ.ಬ್ರ. ಗುರುನಂಜೇಶ್ವರ ಶ್ರೀಗಳು, ಹೇರೂರು ಗುಬ್ಬಿ ಅಜ್ಜನಮಠದ ಷ.ಬ್ರ. ನಂಜುಂಡ ಪಂಡಿತಾರಾಧ್ಯಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಸ್.ಆರ್.ಪಾಟೀಲ, ದಾನಪ್ಪ ಚೂರಿ, ದುಂಡೆಪ್ಪ ಕಾಯಕದ, ಚನ್ನಬಸಯ್ಯ ಹಿರೇಮಠ ಇತರರಿದ್ದರು.