ದೇವಾಲಯಗಳು ಶ್ರದ್ಧಾ ಭಕ್ತಿಯ ಕೇಂದ್ರಗಳಾಗಲಿ

4 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಹಳ್ಳಿ ಇಲ್ಲವೆ ನಗರಗಳಲ್ಲಿ ನಿರ್ಮಾಣಗೊಳ್ಳುವ ದೇವಾಲಯಗಳು ಜನವಿರೋಧಿ ಕೃತ್ಯಗಳ ತಾಣಗಳಾಗದೆ ಅವೆಲ್ಲವೂ ಅಲ್ಲಿರುವ ದೈವ ಸನ್ನಿಧಾನದ ಸ್ಮರಣೆಯೊಂದಿಗೆ ನಿರಂತರ ಜನಮನದಲ್ಲಿ ಸಾತ್ವಿಕ ಸತ್ಯ-ಶುದ್ಧ ಚೈತನ್ಯ ಶಕ್ತಿ ತುಂಬುವ ಶ್ರದ್ಧಾ ಭಕ್ತಿಯ ಕೇಂದ್ರಗಳಾಗಬೇಕು ಎಂದು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಶ್ರೀ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಅಮ್ಮಿನಬಾವಿ ಗ್ರಾಮದ ದೊಡ್ಡೋಣಿಯಲ್ಲಿ ನೂತನವಾಗಿ ನಿರ್ಮಿಸಿದ ದೇವಾಯದಲ್ಲಿ ಸೋಮವಾರ ಶ್ರೀ ವಿನಾಯಕನ ಮೂರ್ತಿ ಪ್ರಾಣಪ್ರತಿಷ್ಠಾಪನೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.

ದೇವಾಲಯಗಳ ನಿರ್ಮಾಣದ ಉದ್ದೇಶವನ್ನು ಸರ್ವರೂ ಅರ್ಥಮಾಡಿಕೊಂಡು ಅಲ್ಲಿಯ ಪರಿಸರದ ಸ್ವಚ್ಛತೆಗೆ ಸಹಕರಿಸಬೇಕು. ಒಂದು ವರ್ಷದಲ್ಲಿ ದೇವಾಲಯದ ಮೂಲಕ ವಿವಿಧ ಸಮಾರಂಭಗಳನ್ನು ಹಮ್ಮಿಕೊಂಡು ಜನತೆಗೆ ಧರ್ಮದ ನೀತಿ, ತತ್ವ, ಬದುಕಿನ ಮಹತ್ವ ತಿಳಿಸಬೇಕು. ಜತೆಗೆ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುವಲ್ಲಿ ಎಲ್ಲರೂ ಚಿಂತಿಸಬೇಕು ಎಂದರು.

ಶ್ರೀ ವಿನಾಯಕನ ಶಿಲಾ ವಿಗ್ರಹದ ಶುದ್ಧೀಕರಣ ಕೈಂಕರ್ಯ ಒಂದು ತಿಂಗಳಿಂದ ನಡೆದಿದ್ದು, ಜಲಾದಿವಾಸ, ಧಾನ್ಯಾದಿವಾಸ, ವಸ್ತ್ರಾದಿವಾಸ, ತೈಲಾದಿವಾಸ ಮುಂತಾದವುಗಳನ್ನು ನಡೆಸಲಾಯಿತು. ಸೋಮವಾರ ಪ್ರಾತಃಕಾಲದಲ್ಲಿ ಶ್ರೀ ಸೋಮಲಿಂಗಶಾಸ್ತ್ರಿ ಗುಡ್ಡದಮಠ ವೈದಿಕತ್ವದಲ್ಲಿ ಉಮಾ ಮಹೇಶ್ವರ ಪೂಜೆ, ಕ್ಷೀರಾಭಿಷೇಕ, ಏಕಾದಶ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ವಾಸ್ತು ಹೋಮ, ಗಣ ಹೋಮ, ನವಗ್ರಹ ಶಾಂತಿ ಹೋಮಗಳನ್ನು ನಡೆಸಿದ ಬಳಿಕ ಶ್ರೀಗಳು ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿದರು.

ಬಿ.ಸಿ. ಕೊಳ್ಳಿ, ಎಂ.ವಿ. ಹೊಸೂರ, ಚಂಬಣ್ಣ ಉಂಡೋಡಿ, ಎಂ.ಸಿ. ಹುಲ್ಲೂರ, ನಿಂಗಪ್ಪ ಮಾದಿಗ್ಗೊಂಡ, ಅಣ್ಣಪ್ಪ ವಾಡಕರ, ಆನಂದ ಸವದತ್ತಿ, ಮಲ್ಲಪ್ಪ ಮೇಟಿ, ಧರ್ಮಪ್ಪ ಉಂಡೋಡಿ, ಸೋಮಪ್ಪ ಬಾರಕೇರ, ಸುನೀಲ ಗುಡಿ, ಶಂಕರ ರಾೂನವರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net