

ಯಲ್ಲಾಪುರ: ದೇವಸ್ಥಾನಗಳು ಹೆಚ್ಚಾದಷ್ಟು ಮನಸಿನಲ್ಲಿ ಒಳ್ಳೆಯ ಭಾವನೆ ಜಾಗೃತವಾಗಲು ಕಾರಣವಾಗುತ್ತದೆ ಎಂದು ರಾಜ್ಯ ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷ ಆರ್.ವಿ. ದೇಶಪಾಂಡೆ ಹೇಳಿದರು.
ಗುರುವಾರ ಸಂಜೆ ಪಟ್ಟಣದ ನಾಯಕನಕೆರೆ ದತ್ತ ಮಂದಿರದ ನೂತನ ಶಿಲಾಮಯ ದೇವಸ್ಥಾನ ನಿರ್ವಣಕ್ಕಾಗಿ ಕುಂಭಕ್ಕೆ ನಿಧಿ ಸಮರ್ಪಣೆ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
ಗುಡಿ ಕಟ್ಟಲು ಹಣಬೇಕು. ಆದರೆ, ಕೇವಲ ಹಣದಿಂದ ಗುಡಿ ಕಟ್ಟಲು ಸಾಧ್ಯವಿಲ್ಲ. ನಮ್ಮಲ್ಲಿರುವ ಸಂಪತ್ತಿನ ಭಾಗ ಸಮಾಜಕ್ಕೂ ಹೋಗಬೇಕು. ಆರ್ಥಿಕ ಸಂಪನ್ನ ಜನರು ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ಮಾತನಾಡಿ, ದತ್ತಮಂದಿರ ನಿರ್ಮಾಣ ಹಲವು ವರ್ಷಗಳ, ಹಲವರ ಕನಸು. ಅದಕ್ಕೆ ರಾಘವೇಶ್ವರ ಶ್ರೀಗಳು ನಾಂದಿ ಹಾಡಿದ್ದಾರೆ. ನಿಧಿ ಸಮರ್ಪಣೆ ಆತ್ಮದ ರೂಪದಲ್ಲಿ ಸಾವಿರಾರು ವರ್ಷಗಳ ಕಾಲ ಇರಲಿದೆ. ದತ್ತ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ತಾಲೂಕಿನ ಎಲ್ಲ ದೇವಸ್ಥಾನಗಳ ತೀರ್ಥಗಳು ದತ್ತಮಂದಿರದಲ್ಲಿ ಅಭಿಷೇಕವಾಗಲಿದೆ. ಇದಕ್ಕಾಗಿ ರಥ ಯಾತ್ರೆ ಹೊರಡಲಿದೆ’ ಎಂದರು.
ಜ್ಯೋತಿಷಾಚಾರ್ಯ ನಾಗೇಂದ್ರ ಭಟ್ಟ ಹಿತ್ಲಳ್ಳಿ, ಎಂಎಲ್ಸಿ ಶಾಂತಾರಾಮ ಸಿದ್ದಿ, ದೇವಸ್ಥಾನದ ಉಸ್ತುವಾರಿ ಮಹೇಶ ಚಟ್ನಳ್ಳಿ, ಸಮಿತಿಯ ಸದಸ್ಯ ನಾಗರಾಜ ಮದ್ಗುಣಿ, ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಪ್ರಮುಖರಾದ ಕೆ.ಟಿ.ಭಟ್ಟ ಗುಂಡ್ಕಲ್ ಎಸ್.ವಿ. ಯಾಜಿ ಇದ್ದರು.