

ಹೊಳೆನರಸೀಪುರ : ಪಟ್ಟಣದ ದೇವಾಂಗ ಬಡಾವಣೆಯ ಶ್ರೀ ರಾಮಲಿಂಗ ಚೌಡೇಶ್ವರಿ, ರಾಮಲಿಂಗೇಶ್ವರ ಹಾಗೂ ಗಣಪತಿ ದೇವರ ನೂತನ ವಿಗ್ರಹ ಪ್ರತಿಷ್ಠಾಪನೆ, ದೇವಾಲಯ ಸಂಪ್ರೋಕ್ಷಣದ ಅಂಗವಾಗಿ ಸೋಮವಾರ (ಜು. 1) ಶಿಖರ ಕಳಸ ಪ್ರತಿಷ್ಠಾಪನಾ ಕುಂಭಾಭಿಷೇಕ ನೆರವೇರಲಿದೆ. ಸೋಮವಾರ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಶಿಖರ ಕಳಸ ಕಲಾಶಾರೋಹಣ, ಯಂತ್ರಸ್ಥಾಪನೆ, ಅಷ್ಟಬಂಧ, ರತ್ನನ್ಯಾಸ, ಮೂರ್ತಿಗಳ ಪ್ರಾಣಪ್ರತಿಷ್ಠಾಪನಾ ಪೂರ್ವಕ ಅಭಿಷೇಕ ಸಂಪನ್ನಗೊಳ್ಳಲಿದೆ. ಹೇಮಾವತಿ ನದಿತೀರದಲ್ಲಿ ಗಂಗೆಪೂಜೆ, ಕಲಾ ತಂಡಗಳ ಪ್ರದರ್ಶದೊಂದಿಗೆ ಕಳಸ ಹೊತ್ತ ಸುಮಂಗಲಿಯರ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಆಗಮಿಸಿ ಸಂಪ್ರದಾಯದಂತೆ ವಿವಿಧ ಆಚರಣೆಗಳಿಗೆ ಮುನ್ನುಡಿ ಬರೆಯಲಿದ್ದಾರೆ. ನಂತರ ನೇತ್ರೋನ್ಮಿಲನ, ನಾಮಕರಣ, ಕದಲಿ ಛೇದನ, ಕನ್ಯಾಥೇನ, ದರ್ಪಣ ದರ್ಶನ, ಮಹಾ ನೈವೇದ್ಯ, ಮಹಾ ಸಂಕಲ್ಪದೊಂದಿಗೆ ಚೌಡೇಶ್ವರಿ ದೇವಿಗೆ ವಿಶೇಷ ರಾಜೋಪಚಾರ, ಮಹಾಮಂಗಳಾರತಿ, ಮಂತ್ರಪುಷ್ಪ ರಾಷ್ಟಾಶೀರ್ವಾದ, ತೀರ್ಥ, ಪ್ರಸಾದ ವಿನಿಯೋಗ ನೆರವೇರಿಸಲಾಗುತ್ತದೆ ಎಂದು ದೇವಾಂಗ ಯುವಕ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.