ಬನಶಂಕರಿ ದೇವಿ ರಥೋತ್ಸವ ಸಂಭ್ರಮ

TKE (2)
Published on

ತರೀಕೆರೆ: ಬನದ ಹುಣ್ಣಿಮೆ ನಿಮಿತ್ತ ಪಟ್ಟಣದ ಗಾಳಿಹಳ್ಳಿ ಕ್ರಾಸ್​ನ ಶ್ರೀ ಬನಶಂಕರಿ ದೇವಿಯ 7ನೇ ವರ್ಷದ ರಥೋತ್ಸವ ಗುರುವಾರ ವಿಜೃಂಭಣೆಯಿಂದ ನೆರವೇರಿತು.

ಮುಂಜಾನೆ ವಿವಿಧ ಅಭಿಷೇಕದೊಂದಿಗೆ ಧಾರ್ವಿುಕ ಕಾರ್ಯ ಆರಂಭಗೊಂಡವು. ದೇಗುಲ ಆವರಣದಲ್ಲಿ ಕಳಸ ಸ್ಥಾಪನೆ, ಆದಿವಾಸ, ನವಗ್ರಹ, ರಥಾದಿವಾಸ ಹೋಮದ ಬಳಿಕ ಕಳಸಾಭಿಷೇಕ ನಡೆಯಿತು. ವಿವಿಧ ಹೂವುಗಳಿಂದ ಅಲಂಕೃತವಾಗಿದ್ದ ದೇವಿಯನ್ನು ಪೂಜಿಸಿ ಭಕ್ತರಿಗೆ ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗಿಸಲಾಯಿತು.

ಬೆಳಗ್ಗೆ 11ಕ್ಕೆ ರಥಶುದ್ಧಿ, ಉತ್ಸವ ಬಲಿ ನೆರವೇರಿಸಿದ ನಂತರ ಉತ್ಸವ ಮೂರ್ತಿ ಮೆರವಣಿಗೆ ನಡೆಸಿ ರಥದಲ್ಲಿ ಕೂರಿಸಲಾಯಿತು. ಕಳೆದ ಬಾರಿ ಹರಾಜಿನಲ್ಲಿ ರಥೋತ್ಸವದ ಧ್ವಜ ಪಡೆದಿದ್ದ ಶಾಸಕ ಡಿ.ಎಸ್.ಸುರೇಶ್ ಮತ್ತು ಕುಟುಂಬದವರು ರಥೋತ್ಸವಕ್ಕೆ ಚಾಲನೆ ನೀಡಿದರು. ಮಧ್ಯಾಹ್ನ 1ಕ್ಕೆ ಭಕ್ತರು ಹಷೋದ್ಗಾರ ಹಾಕುತ್ತ ತೇರು ಎಳೆದರು.

ಈ ಬಾರಿ ರಥೋತ್ಸವದ ಧ್ವಜವನ್ನು ಸಚಿವ ಸಚಿವ ಶ್ರೀರಾಮಲು ಅವರ ಆಪ್ತ ಕಾರ್ಯದರ್ಶಿ ರಮೇಶ್ ವಾಲ್ಮೀಕಿ ಎಂಬುವರು 2.30 ಲಕ್ಷ ರೂ.ಗೆ ಹರಾಜಿನಲ್ಲಿ ಪಡೆದರು.

ತಹಸೀಲ್ದಾರ್ ಸಿ.ಜಿ.ಗೀತಾ, ದೇವಾಂಗ ಸಮಾಜದ ಅಧ್ಯಕ್ಷ ಟಿ.ಜಿ.ಶಂಕರ್, ಕಾರ್ಯದರ್ಶಿ ಶೆಟ್ರು ನಾಗರಾಜ್, ದೇಗುಲದ ಸ್ಥಳ ದಾನಿ ಗಿರಿಜಮ್ಮ ಟಿ.ಆರ್.ನಾಗರಾಜ್, ಪುರಸಭೆ ಮಾಜಿ ಅಧ್ಯಕ್ಷರಾದ ಟಿ.ಜಿ.ಅಶೋಕ್​ಕುಮಾರ್, ಟಿ.ಎಲ್.ಅಶ್ವಿನಿ, ಟಿ.ಎಸ್.ರಮೇಶ್, ಟಿ.ಎಸ್.ಧರ್ಮರಾಜ್, ರಥ ಸಮಿತಿ ಅಧ್ಯಕ್ಷ ಟಿ.ಎಚ್.ಯಶವಂತ್, ದೇಗುಲ ಸಮಿತಿ ಸದಸ್ಯರಾದ ಕಿಟ್ಟಣ್ಣ, ಸೋಮಶೇಖರ್, ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net