

ವಿಜಯವಾಣಿ ಸುದ್ದಿಜಾಲ ವಿಜಯಪುರ
ಅಹಿಂಸೆ, ಸತ್ಯ, ಶಾಂತಿಯ ಪ್ರತೀಕವಾಗಿದ್ದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀ, ಸರಳತೆಯ ಮೂರ್ತಿ ಲಾಲ್ ಬಹದೂರ್ ಶಾಸ್ತ್ರಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ವ್ಯಕ್ತಿತ್ವ ನಮ್ಮ ದೇಶವಲ್ಲದೇ ಪ್ರಪಂಚಕ್ಕೆ ಮಾದರಿಯಾಗಿದೆ ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಪಟ್ಟಣದ ಚೆನ್ನಕೇಶವ ಸ್ವಾಮಿ ದೇವಾಲಯದಲ್ಲಿ ಕುಟುಂಬದೊಂದಿಗೆ ಗುರುವಾರ ದೇವರಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ಈಗಾಗಲೇ 80 ವರ್ಷ ವಯಸ್ಸಾದ ಕಾರಣ ರಾಜಕೀಯದಿಂದ ನಿವೃತ್ತಿ ಹೊಂದಿದ್ದರೂ ಸಾರ್ವಜನಿಕ ಸೇವಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ, ಪುತ್ರ ಶರತ್ ಬಚ್ಚೇಗೌಡ ಶಾಸಕರಾಗಿ, ಕಿಯೋನಿಕ್ಸ್ ನ ಅಧ್ಯಕ್ಷರಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಬಮುಲ್‌ನ ನಿರ್ದೇಶಕ ಬಿ.ವಿ.ಸತೀಶ್ ಗೌಡ, ರಾಜ್ಯ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷರಾದ ಬಿವಿ ರಾಜಶೇಖರ ಗೌಡ, ತಾವರೆಕೆರೆ ರಾಜಶೇಖರ್, ಋಷಿಕುಲ ಶಾಲೆಯ ದೇವರಾಜ್, ಸುಪ್ರೀತ್, ದೊಡ್ಡ ತತ್ತಮಂಗಲ ನಾರಾಯಣಸ್ವಾಮಿ, ಗೋಪಾಲಗೌಡರು, ನಾರಾಯಣಗೌಡರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಯ ಮಾಜಿ ಅಧ್ಯಕ್ಷ ಮುನಿಯಪ್ಪ, ಅರ್ಚಕರುಗಳಾದ ಮುರಳಿದರ್ ಭಟ್ಟಾಚಾರ್ಯ, ರಾಜು ಸ್ವಾಮಿ, ಶ್ರೀ ಚನ್ನಕೇಶವ ಸ್ವಾಮಿ ದೇವಾಲಯ ಸಮಿತಿಯ ಮನೋಹರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದು ಬಿ ಎಂ ಬಚ್ಚೇಗೌಡರಿಗೆ ಶುಭಾಶಯ ಕೋರಿದರು.