ಅಂಗಾಳ ಪರಮೇಶ್ವರಿ ಸನ್ನಿಧಿಯಲ್ಲಿ ಕುಂಭಾಭಿಷೇಕ

6 vpt 1
Published on


ವಿರಾಜಪೇಟೆ : ಕೊಡಗಿನ ಅರಸರಾಗಿದ್ದ ಮುದ್ದರಾಜನಿಂದ ಸ್ಥಾಪಿತವಾಗಿರುವ ಶ್ರೀ ಅಂಗಾಳ ಪರಮೇಶ್ವರಿ ದೇವಿಯ ದೇಗುಲ ಮರು ನಿರ್ಮಾಣಗೊಂಡ ಪ್ರಥಮ ಮಹಾ ಕುಂಭಾಭಿಷೇಕ ಅಂಗವಾಗಿ 3 ದಿನಗಳ ಕಾಲ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರಿದವು.
ಪಟ್ಟಣದ ವೀರ ರಾಜೇಂದ್ರಪೇಟೆಯ ತೆಲುಗು ಶೆಟ್ಟರ ಬೀದಿಯಲ್ಲಿ 24 ಮನೆ ತೆಲುಗು ಶೆಟ್ಟಿ ಸಮುದಾಯದ ಇತಿಹಾಸ ಪ್ರಸಿದ್ಧ ದೇಗುಲದಲ್ಲಿ ನೆಲೆಸಿರುವ ದೇವಿ ಸನ್ನಿಧಿಗೆ ಕುಂಭಾಭಿಷೇಕ ಅಂಗವಾಗಿ ಮಂಗಳವಾರ ಸಂಜೆ ಗಣಪತಿ ಹೋಮ ದೊಂದಿಗೆ ಪೂಜಾ ಕಾರ್ಯಗಳು ಚಾಲನೆಗೊಂಡವು.
ವಾಸ್ತುಶಾಂತಿ, ಮೃತ್ತಿಕಾ ಸಂಗ್ರಹ, ಅಂಕುರಾರ್ಪಣೆ, ರಕ್ಷಾಬಂಧನ, ಪ್ರಥಮ ಕಾಲಯಾಗ ಪೂಜೆ ಇತ್ಯಾದಿಗಳು ತಮಿಳುನಾಡಿನ ಇತಿಹಾಸ ಪ್ರಸಿದ್ಧ ತಿರುಪುರ್ ಮುಗನ್ ಪುಂಡಿ ದೇಗುಲದ ಪ್ರಧಾನ ಅರ್ಚಕರ ಸಾರಥ್ಯದಲ್ಲಿ ನೆರವೇರಿತು.
ಬುಧವಾರ ಬೆಳಗ್ಗೆ ವಿನಾಯಕ ಪೂಜೆ, ಶಿವಸೂರ್ಯ ಪೂಜೆ, ವಿಶೇಷ ಸಂಧಿ, ಎರಡನೇ ಕಾಲಯಾಗ ಪೂಜೆ, ಮೂಲ ಮಂತ್ರ, ಆಸ್ತ್ರಮಂತ್ರ ಹೋಮ ನಡೆಯಿತು. ಸಂಜೆ ವಿನಾಯಕ ಪೂಜೆ, ಸೋಮಕುಂಭ ಪೂಜೆ, ದ್ರವ್ಯಾಹುತಿ, ಲಲಿತಾ ತ್ರಿಷತಿ ಪಾರಾಯಣ, ಮಹಾಪೂರ್ಣಾಹುತಿ, ಮಂಗಳಾರತಿ ನೆರವೇರಿಸಲಾಯಿತು. ಗುರುವಾರ ಗಣಪತಿ ಹೋಮದೊಂದಿಗೆ ಆರಂಭವಾದ ವಿಧಿಗಳಲ್ಲಿ ಸೂರ್ಯಪೂಜೆ, ವಿವಿಧ ಹೋಮ, ಬಿಂಬ ಶುದ್ಧಿ, ನಾಡಿಸಂಧಾನ, ದ್ರವ್ಯಾಹುತಿ, ಮಹಾ ಪೂರ್ಣಾಹುತಿ, ಮಹಾಮಂಗಳಾರತಿ ನಡೆಸಲಾಯಿತು. ನಂತರ ಗರ್ಭ ಗೋಪುರ ಕಳಸ ಕುಂಭಾಭಿಷೇಕ, ದೇವಿ, ಗಣಪತಿ, ಸುಬ್ರಮಣ್ಯ, ಕರುಪ್ಪ ಸ್ವಾಮಿ ಮೂರ್ತಿಗಳಿಗೆ ಕುಂಭ ಕಲಶಾಭಿಷೇಕಗಳನ್ನು ಅರ್ಚಕರು ನಿರ್ವಹಿಸಿದರು. ಗೋಪೂಜೆ ನಂತರ ದೇವಿಗೆ ವಿಶೇಷ ಅಲಂಕಾರ ಪೂಜೆ ಸಮರ್ಪಣೆಯಾದವು. 24 ಮನೆ ತೆಲುಗು ಶೆಟ್ಟಿ ಸಮುದಾಯದ ಮುಖಂಡರು, ದೇವಾಲಯ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು. ನೂರಾರು ಭಕ್ತರು ದರ್ಶನ ಪಡೆದು ಧನ್ಯತೆ ಮೆರೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net