

ಮದ್ದೂರು : ದಾನಿಗಳಿಂದ ಆರ್ಥಿಕ ಸಂಪನ್ಮೂಲ ಸಂಗ್ರಹಿಸಿ ದೇವಾಲಯದ ಅಭಿವೃದ್ಧಿಗೆ ಮುಂದಾಗಬೇಕೆಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಅಧ್ಯಕ್ಷ ಕದಲೂರು ಬಸವರಾಜ ಹೇಳಿದರು. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಘಟಕ ಹಾಗೂ ಅಮರಶಿಲ್ಪಿ ಜಕಣಾಚಾರಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶನಿವಾರ ಪಟ್ಟಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬೆಸಗರಹಳ್ಳಿ ಕಾಳಿಕಾಂಬಾ ಸೇವಾ ಅಭಿವೃದ್ಧಿ ಟ್ರಸ್ಟ್ ನೂತನ ಅಧ್ಯಕ್ಷ ಕೆ. ಸ್.ಹರೀಶ್ ಅವರನ್ನು ಸನ್ಮಾನಿಸಿ ಮಾತನಾಡಿದರು. ಹಲವು ವರ್ಷಗಳಿಂದ ಬೆಸಗರಹಳ್ಳಿ ಕಾಳಿಕಾಂಬಾ ದೇವಾಲಯ ಕಾಮಗಾರಿ ನನೆಗುದಿಗೆ ಬಿದ್ದಿದೆ. ಸಮುದಾಯದವರ
ಸಂಘಟನೆ ಮಾಡಿ, ದಾನಿಗಳಿಂದ ಸಂಪನ್ಮೂಲ ಕ್ರೋಢೀಕರಿಸಿ ದೇವಾಲಯದ ಅಭಿವೃದ್ಧಿಗೆ ಮುಂದಾಗಬೇಕೆಂದು ಸಲಹೆ ನೀಡಿದರು. ವಿಶ್ವಕರ್ಮ ಮಹಾಸಭಾ ತಾಲೂಕು ಗೌರವಾಧ್ಯಕ್ಷ ಎಚ್.ಪಿ.ಈಶ್ವರಚಾರ್, ಕಾರ್ಯದರ್ಶಿ ಪಿ.ಸಿದ್ದಪ್ಪಾಜಿ, ಮಾಜಿ ಅಧ್ಯಕ್ಷ ಎಂ.ಸಿ.ಕೃಷ್ಣಾಚಾರ್, ವಿಶ್ವಕರ್ಮ ಯುವ ಘಟಕದ ತಾಲೂಕು ಮಾಜಿ ಅಧ್ಯಕ್ಷ ಎಂ.ಪಿ.ಮಹೇಶ್, ಮುಖಂಡರಾದ ಬೆಳ್ಳೂರ್ ಸ್ವಾಮಿ, ಮಂಟೇಸ್ವಾಮಿ, ಅಭಿ, ಕೋಣಸಾಲೆ ಪುಟ್ಟಸ್ವಾಮಿ, ಸುರೇಶ್, ಲಕ್ಷ್ಮಣಾಚಾರ್ ಇದ್ದರು.