

ವಿಜಯವಾಣಿ ಸುದ್ದಿಜಾಲ ಮೈಸೂರು
ಜಿಲ್ಲೆಯ ವಿವಿಧೆಡೆ ಬಳೆ ಮಾರಾಟ, ಗ್ಯಾಸ್ ರಿಪೇರಿ ಮಾಡುವ ಸೋಗಿನಲ್ಲಿ ಊರೂರು ಅಲೆಯುತ್ತಿದ್ದ ಖದೀಮರ ಗುಂಪೊಂದು ಮೂಗೂರು ತ್ರಿಪುರ ಸುಂದರಮ್ಮ ದೇವಸ್ಥಾನ ಸೇರಿದಂತೆ ಹಲವೆಡೆ ನಡೆಸಿರುವ ಕಳವು ಪ್ರಕರಣವನ್ನು ಬೇಧಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದು, ಆರು ಆರೋಪಿಗಳನ್ನು ಬಂಧಿಸಿ ಹಲವು ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ.
ಮೂಗೂರು ತ್ರಿಪುರ ಸುಂದರಮ್ಮ ದೇವಸ್ಥಾನದಲ್ಲಿ ಜು.16 ರಂದು ಕಳವು ನಡೆದಿತ್ತು. ದೇವಸ್ಥಾನದ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಹುಂಡಿ ಒಡೆದು ಚಿಲ್ಲರೆ ನಾಣ್ಯವನ್ನು ದೋಚಿಸಿದರು. ನಂತರ ಬೀರುವಿನಲ್ಲಿದ್ದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರು ಆರೋಪಿಗಳನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂ ಡಿದ್ದಾನೆ. ಆರೋಪಿಗಳ ಬಂಧನದೊಂದಿಗೆ ಹಲವು ಪ್ರಕರಣಗಳು ಬಯಲಿಗೆ ಬಂದಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಬಂಧಿತರಿಂದ 17.5 ಲಕ್ಷ ರೂ. ವೌಲ್ಯದ ನಗದು 484 ಗ್ರಾಂ ಚಿನ್ನಾಭರಣ, 3.89 ಲಕ್ಷ ರೂ. ನಗದು, 16 ಸಾವಿರ ಚಿಲ್ಲರೆ ನಾಣ್ಯ, ಮೂರು ಬೈಕ್‌ಗಳು, 22 ವಿವಿಧ ಮಾದರಿಯ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಖದೀಮರು ಮೈಸೂರು ಭಾಗದವರಾಗಿದ್ದು, ದೇವಸ್ಥಾನಗಳಲ್ಲಿ ಕಳವು ಮಾಡುವುದರಲ್ಲಿ ನಿಸ್ಸಿಮರಾಗಿದ್ದರು ಎಂದು ತಿಳಿಸಿದರು.
ಬಳೆ ಮಾರಾಟ, ಗ್ಯಾಸ್ ರಿಪೇರಿ ಮಾಡುವ ಕೆಲಸ ಮೂಲಕ ಊರೂರು ಅಲೆಯುತ್ತಿದ್ದ ಈ ಖದೀಮರ ತಂಡ ದೇವಸ್ಥಾನಗಳಲ್ಲಿ ಕಳವು ಮಾಡಿ ಪರಾರಿಯಾಗುತ್ತಿದ್ದರು. ಆರೋಪಿಗಳ ಪೈಕಿ ಇಬ್ಬರು ಎರಡು ತಿಂಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿ ಮತ್ತೆ ಕಳ್ಳತನ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಆರೋಪಿಗಳ ಬಂಧನದಿಂದ ಮೈಸೂರು ನಗರದ ಆಲನಹಳ್ಳಿ ಮತ್ತು ನಂಜನಗೂಡು ಗ್ರಾಮಾಂತರ ಠಾಣೆಯ ಬೈಕ್ ಕಳ್ಳತನ ಪ್ರಕರಣ, ಹಳೇ ತಿರುಮಕೂಡಲು ಗ್ರಾಮದ ಚೌಡೇಶ್ವರಿ ದೇವಸ್ಥಾನ, ಯಳಂದೂರಿನ ಅಗರ ಗ್ರಾಮದ ಹಿಂಡಿ ಮಾರಮ್ಮನ ದೇವಸ್ಥಾನ, ನಂಜನಗೂಡಿನ ಚಿನ್ನದಗುಡಿಹುಂಡಿಯ ರಾಮವ್ವ ದೇವಸ್ಥಾನ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ ಎಂದರು.