ಕರಾವಳಿಯ ದೇವಳಗಳು ತೆರೆಯಲು ಸಿದ್ಧ

Kukke 14 jan 20
Published on

ಮಂಗಳೂರು: ಜೂನ್ 1ರಿಂದ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಸಿದ್ಧತೆ ನಡೆದಿದೆ. ಆದರೆ ಸರ್ಕಾರದ ಸುತ್ತೋಲೆ ತಲುಪದ ಹಿನ್ನೆಲೆಯಲ್ಲಿ ರೂಪುರೇಷೆ ಅಂತಿಮಗೊಂಡಿಲ್ಲ.

ರಾಜ್ಯದ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ ಮಂಜುನಾಥೇಶ್ವರ ದೇವಸ್ಥಾನ, ಕಟೀಲು ದುರ್ಗಾಪರಮೇಶ್ವರಿ, ಕೊಲ್ಲೂರು ಮೂಕಾಂಬಿಕೆ, ಕದ್ರಿ ಶ್ರೀ ಮಂಜುನಾಥೇಶ್ವರ, ಮಂಗಳಾದೇವಿ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ಸರ್ಕಾರದ ಸುತ್ತೋಲೆ ಆಧರಿಸಿ ದೇವರ ದರ್ಶನಕ್ಕೆ ಹಾಗೂ ಸೇವೆಗೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.

ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಳ ಮರು ತೆರೆಯುವ ಬಗ್ಗೆ ಗುರುವಾರ ಚರ್ಚೆ ನಡೆದಿದೆ. ಭಕ್ತರು ಅಂತರ ಕಾಯ್ದುಕೊಂಡು ದೇವಳ ಪ್ರವೇಶಿಸುವುದು, ಸ್ವಚ್ಛತೆಗೆ ಒತ್ತು, ಮಾಸ್ಕ್ ಧರಿಸಿ ಬರುವ ಕುರಿತು ನಿರ್ಧರಿಸಲಾಗಿದೆ. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆಡಳಿತ ಕಚೇರಿಯಲ್ಲಿ ಮೇ 29ರಂದು ಆಡಳಿತಾಧಿಕಾರಿ ಡಾ.ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ಬೆಳಗ್ಗೆ 10ಕ್ಕೆ ಸಭೆ ಕರೆಯಲಾಗಿದೆ.

ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾರ್ಥವಾಗಿ ವಿಶೇಷ ಹವನ ಹಾಗೂ ಅಭಿಷೇಕ ಮತ್ತು ಪೂಜೆ ಹಮ್ಮಿಕೊಳ್ಳಲಾಗಿದೆ. ಭಕ್ತರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ ಕೋರಿದ್ದಾರೆ.

ಉಡುಪಿ ಶ್ರೀ ಕೃಷ್ಣ ಮಠಕ್ಕೆ ಸುರಕ್ಷತೆ ದೃಷ್ಟಿಯಿಂದ ಇನ್ನೂ 15 ದಿನ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ನಿರ್ಧಾರ ಕೈಗೊಳ್ಳದ ಚರ್ಚ್‌ಗಳು: ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಆರಂಭಿಸುವ ಕುರಿತು ಸರ್ಕಾರದ ನಿಯಮಾವಳಿ ಇನ್ನೂ ಬಂದಿಲ್ಲ. ಸರ್ಕಾರದ ಸೂಚನೆ ಬಳಿಕ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಂಗಳೂರು ಬಿಷಪ್ ಹೌಸ್ ಸಾರ್ವಜನಿಕ ಸಂಪರ್ಕಾಧಿಕಾರಿ ವಿಕ್ಟರ್ ವಿಜಯ್ ಲೋಬೊ ಮಾಹಿತಿ ನೀಡಿದ್ದಾರೆ. ಉಡುಪಿ ಧರ್ಮಪ್ರಾಂತ್ಯದಲ್ಲೂ ಸರ್ಕಾರದ ಆದೇಶದ ಬಳಿಕ ನಿರ್ಧಾರ ಕೈಗೊಳ್ಳುವ ಬಗ್ಗೆ ಚಿಂತಿಸಲಾಗಿದೆ.

ವಕ್ಫ್ ಆದೇಶ ಬಳಿಕ ತೀರ್ಮಾನ: ಮಸೀದಿಗಳಲ್ಲಿ ಅಂಗಶುದ್ಧಿಗೆ ನೀರಿನ ತೊಟ್ಟಿ ಬದಲು ನಲ್ಲಿ ಅಳವಡಿಸಲು ಉಡುಪಿ ಸಂಯುಕ್ತ ಖಾಜಿ ಬೇಕಲ ಇಬ್ರಾಹಿಂ ಮುಸ್ಲಿಯರ್ ತೀರ್ಮಾನಿಸಿದ್ದಾರೆ. ಮಕ್ಕಳು ಮತ್ತು ಹಿರಿಯರು ಮಸೀದಿಯ ಬದಲು ಮನೆಯಲ್ಲೇ ನಮಾಜ್ ಮಾಡಬೇಕು. ಮಸೀದಿಯಲ್ಲಿ ದೈಹಿಕ ಅಂತರ ಕಾಪಾಡುವುದು, ನಮಾಜ್ ವೇಳೆ ಹಾಸುವ ಬಟ್ಟೆಯನ್ನು ಅವರವರೇ ತರಬೇಕು ಎಂದು ತಿಳಿಸಿದ್ದಾರೆ. ವಕ್ಫ್ ಬೋರ್ಡ್ ಆದೇಶ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ದ.ಕ. ಖಾಜಿ ತ್ವಾಕ ಅಹಮದ್ ಮುಸ್ಲಿಯಾರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net