

ಕೆ.ಆರ್.ಪೇಟೆ : ತಾಲೂಕಿನ ಹೊಸಹೊಳಲು ಗ್ರಾಮದ ಕೋಟೆ ಶ್ರೀ ಭೈರವೇಶ್ವರಸ್ವಾಮಿ ದೇವಾಲಯದ ರಾಜಗೋಪುರ ಹಾಗೂ ಸಮುದಾಯ ಭವನದ ಉದ್ಘಾಟನೆ ಹಾಗೂ 24ವರ್ಷದ ಪರ ಕಾರ್ಯಕ್ರಮ ಫೆ.16 ರಂದು ನಡೆಯಲಿದೆ ಎಂದು ಶಾಸಕ ಹಾಗೂ ದೇವಾಲಯದ ಟ್ರಸ್ಟ್ ಗೌರವಾಧ್ಯಕ್ಷ ಎಚ್.ಟಿ. ಮಂಜು ತಿಳಿಸಿದರು.
ಪಟ್ಟಣದ ಗೃಹ ಕಚೇರಿಯಲ್ಲಿ ಮಂಗಳವಾರ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಹೊಸಹೊಳಲು ಹೊಯ್ಸಳರ ಶಿಲ್ಪಕಲೆಯ ಬೀಡು. ಜಿಲ್ಲೆಯ ಸಾಂಸ್ಕೃತಿಕ ತವರು. ಇಲ್ಲಿರುವ ಕೋಟೆ ಭೈರವೇರೇಶ್ವರ ದೇವಾಲಯವನ್ನು ಮಾಜಿ ಶಾಸಕ ಸಾ.ರಾ.ಮಹೇಶ್ ಸಹಕಾರದಿಂದ ಜೀರ್ಣೋದ್ಧಾರ
ಗೊಳಿಸಲಾಗಿದೆ ಎಂದರು. ಕೋಟೆ ಭೈರವೇಶ್ವರಸ್ವಾಮಿ ಒಕ್ಕಲಿಗೆ ಸೇರಿದ ನಾನು ಮತ್ತು ಮನೆತನದವರು ಸೇರಿ 24 ವರ್ಷಗಳಿಗೊಮ್ಮೆ ಪರ ಕಾರ್ಯಕ್ರಮವನ್ನು ಅಂದೇ ದೇಗುಲದ ಆವರಣದಲ್ಲಿ ನಡೆಸುತ್ತಿದ್ದೇವೆ. ಧಾರ್ಮಿಕ ಕಾರ್ಯಕ್ರಮಗಳು ಫೆ.12ರಿಂದಲೇ ಆರಂಭಗೊಳ್ಳಲಿವೆ ಎಂದು ಅವರು ವಿವರಿಸಿದರು.
ಫೆ.16 ರಂದು ನಡೆಯಲಿರುವ ಪ್ರಧಾನ ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನದ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ, ಮಾಜಿ ಶಾಸಕ ಸಾ.ರಾ.ಮಹೇಶ್ ಮತ್ತು ಸಿ.ಎಸ್. ಪುಟ್ಟರಾಜು ಭಾಗವಹಿಸಲಿದ್ದಾರೆ. 17 ರಂದು ಸಂಜೆ ಗುಡ್ಡೇನಹಳ್ಳಿ ಗ್ರಾಮದಲ್ಲಿ ದೇವಮ್ಮ ಮತ್ತು ಲಕ್ಷ್ಮೀದೇವಿ ಅಮ್ಮನವರಿಗೆ ತಂಬಿಟ್ಟಿನ ಆರತಿ ಮತ್ತು ಉತ್ಸವ ಹಮ್ಮಿಕೊಳ್ಳಲಾಗಿದೆ. 18 ರಂದು ಪರ ನಡೆಯಲಿದೆ. ಹೊಸಹೊಳಲು ಮತ್ತು ಕೆ.ಆರ್. ನಗರ ತಾಲೂಕಿನ ಹೆಬ್ಬಾಳು ಕೊಪ್ಪಲು, ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮಸ್ಥರು ಪೂಜಾದಿಗಳನ್ನು ನಡೆಸಿಕೊಡಲಿದ್ದಾರೆಂದು ಎಚ್.ಟಿ. ಮಂಜು ಹೇಳಿದರು. ದೇವಾಲಯ ಟ್ರಸ್ಟಿನ ಅಧ್ಯಕ್ಷೆ ಮಂಜುಳಾ ಚನ್ನಕೇಶವ ಇದ್ದರು.