

ಕೆ.ಆರ್.ಪೇಟೆ: ದೇವಾಲಯಗಳು ಶಾಂತಿ ನೆಮ್ಮದಿ, ಸಂತೋಷವನ್ನು ನೀಡುವ ತಾಣಗಳಾಗಿವೆ. ದೇವಾಲಯಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ತಾಲೂಕಿನ ಶೇಳನೆರೆ ಹೋಬಳಿಯ ಬೇಲದಕೆರೆ ಗ್ರಾಮದ ಅಮೃತೇಶ್ವರ ಹಾಗೂ ಭೈರವೇಶ್ವರ ದೇವಸ್ಥಾನಗಳ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವಾಲಯಗಳು ನಮ್ಮ ಸಂಸ್ಕೃತಿಗಳ ಪ್ರತಿಬಿಂಬಿಸುವ ಪರಂಪರೆ ಹೊಂದಿವೆ. ಶಾಂತಿ ನೆಮ್ಮದಿ ನೀಡುವ ಜತೆಗೆ ನಮ್ಮ ಇತಿಹಾಸದ ಮೇಲೆ ಬೆಳಕು ಚೆಲ್ಲುತ್ತಿರುವ ದೇವಾಲಯಗಳ ಸಂರಕ್ಷಣೆಯು ಸಹ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಅಮೃತೇಶ್ವರ ಹಾಗೂ ಭೈರವೇಶ್ವರ ಭಗವಂತನ ಕೃಪೆ ಎಲ್ಲರ ಮೇಲೆ ಇರಲಿ ನಾಡಿಗೆ ಸಮಯಕ್ಕೆ ಸರಿಯಾಗಿ ಮಳೆ ಬೆಳೆ ಆಗಿ ರೈತಾಪಿ ವರ್ಗ ಹಾಗೂ ಜನತೆ ಸಮೃದ್ಧಿಯ ಜೀವನ ನಡೆಸಲು ಅನುಗ್ರಹ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದರು.
ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿ ಇಂದಿನ ಒತ್ತಡದ ಜೀವನದಲ್ಲಿ ಮಾನವರಾದ ನಾವು ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗಿದರೆ ಮನಸ್ಸಿಗೆ ಶಾಂತಿ ನೆಮ್ಮದಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಆದ್ದರಿಂದ ಸಾಧನೆ ಮಾಡಲು ಕಷ್ಟವಾದರೂ ನ್ಯಾಯ ನೀತಿ ಧರ್ಮ ಹಾಗೂ ಸತ್ಯದ ದಾರಿಯಲ್ಲಿಯೇ ಸಾಗಿ ಗುರಿಮುಟ್ಟಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗ್ರಾಮಗಳಲ್ಲಿ ದೇವರ ವಿಚಾರದಲ್ಲಿ ರಾಜಕಾರಣ ಬೆರೆಸಬಾರದು. ಅದು ಒಳ್ಳೆಯ ಬೆಳವಣಿಗೆ ಅಲ್ಲ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಮಾಡಿ, ನಂತರ ಗ್ರಾಮದ ಶ್ರೇಯೋಭಿವೃದ್ಧಿಗೆ ಎಲ್ಲರೂ ಪಕ್ಷಾತೀತವಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.
ಬಾಳೆ ಹೊನ್ನೂರು ಮಠದ ತೆಂಡೇಕೆರೆ ಶಾಖಾ ಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಗ್ರಾಮದ ಹಿರಿಯ ಮುಖಂಡ ಜಿ.ಪಂ. ಮಾಜಿ ಸದಸ್ಯ ಪಾಪೇಗೌಡ, ರಾಜ್ಯ ಮಾರಾಟ ಮಹಾಮಂಡಳ ನಿರ್ದೇಶಕ ಶೀಳನೆರೆ ಮೋಹನ್, ಟಿಎಪಿಸಿಎಂಎಸ್ ಮಾಜಿ ನಿರ್ದೇಶಕ ಎಚ್.ಟಿ.ಲೋಕೇಶ್, ಶಿಕ್ಷಕ ಬಿಸಿಎಸ್ ಕುಮಾರ್, ಮುಖಂಡರಾದ ಪಾಪೇಗೌಡ, ನಂಜೇಗೌಡ, ಶಿವಪ್ಪ, ಕಂಟ್ರಾಕ್ಟರ್ ಕೃಷ್ಣೇಗೌಡ, ಪ್ರತಿಷ್ಟಾಪನಾ ಮಹೋತ್ಸವದ ಅಂಗವಾಗಿ ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೆ ಸಾಮೂಹಿಕ ಅನ್ನ ಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.