ಮುಜರಾಯಿ ದೇವಸ್ಥಾನಗಳ ಜಾಗ ಸರ್ವೆಗೆ ಎಂಟು ತಿಂಗಳ ಕಾಲಾವಕಾಶ

web 3
Published on

ಚಿಕ್ಕಮಗಳೂರು: ತಾಲೂಕಿನ ಎಲ್ಲ ಮುಜರಾಯಿ ದೇವಸ್ಥಾನಗಳ ಜಾಗವನ್ನು ಇನ್ನು ಎಂಟು ತಿಂಗಳಲ್ಲಿ ಅಳತೆ ಮಾಡಿ ದಾಖಲೆ ಸಿದ್ಧಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಕಂದಾಯ ಹಾಗೂ ಭೂಮಾಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಪಂ ತ್ರೖೆಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸದಸ್ಯ ಬೆಳವಾಡಿ ರವೀಂದ್ರ ವಿಷಯ ಪ್ರಸ್ತಾಪಿಸಿ ಮುಜರಾಯಿ ದೇವಸ್ಥಾನಗಳ ಬಹಳಷ್ಟು ಜಮೀನು ಒತ್ತುವರಿಯಾಗಿದೆ ಎಂದು ಹೇಳಿದಾಗ ಸಚಿವ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಲೂಕಿನ ಎಲ್ಲ ಎಂಟು ಹೋಬಳಿಗಳಲ್ಲಿನ ಮುಜರಾಯಿ ದೇವಸ್ಥಾನಗಳ ಜಾಗವನ್ನು ಎಂಟು ತಿಂಗಳಲ್ಲಿ ಪತ್ತೆಹಚ್ಚುವ ಕೆಲಸ ಆಗಬೇಕು. ಈ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸಿಕೊಂಡು ಪ್ರತಿ ತಿಂಗಳಿಗೆ ಒಂದು ಹೋಬಳಿಯಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದರು.

ಫಾಮ್ರ್ 50, 53 ರಲ್ಲಿ ಮಂಜೂರಾತಿಯಾದ ಪ್ರಕರಣಗಳಲ್ಲಿ ಸಭೆಯಲ್ಲೇ ಅವರ ಸದಸ್ಯರಾದ ಅರಣ್ಯ ಇಲಾಖೆ ಅಧಿಕಾರಿಗಳು ಅಭಿಪ್ರಾಯ ಪಡೆದು ಅರ್ಜಿ ವಿಲೇವಾರಿ ಮಾಡಲು ಅವಕಾಶವಿದೆ. ಹೀಗಿದ್ದರೂ ಸಮಿತಿಯಲ್ಲಿ ಮಂಜೂರಾತಿಯಾದ ನಂತರವೂ ಸಾಗುವಳಿ ಚೀಟಿ ವಿತರಿಸದೆ ಬಾಕಿ ಉಳಿಸಿಕೊಳ್ಳುವುದು ಏಕೆ ಎಂದು ಸಚಿವರು ಪ್ರಶ್ನಿಸಿದ ಸಂದರ್ಭ ಕೆಲವೆಡೆ ಜಂಟಿ ಸರ್ವೆ ಆಗದೆ ಪ್ರಕರಣ ಬಾಕಿ ಇರುವುದಾಗಿ ತಹಸೀಲ್ದಾರ್ ತಿಳಿಸಿದಾಗ, ಆದಷ್ಟು ಬೇಗನೆ ಸರ್ವೆ ಕಾರ್ಯ ಪೂರೈಸುವಂತೆ ಸೂಚನೆ ನೀಡಿದರಲ್ಲದೆ ಆದಷ್ಟು ಬೇಗನೆ ಸಾಗುವಳಿ ಚೀಟಿ ಕೊಡುವ ಕೆಲಸ ಆಗಬೇಕು ಎಂದರು.

ದೀನ್ ದಯಾಳ್ ಉಪಾಧ್ಯಾಯ ಯೋಜನೆಯಡಿ ಗ್ರಾಮೀಣ ವಿದ್ಯುದ್ದೀಕರಣ ಯೋಜನೆಯ ವಿಳಂಬವಾಗುತ್ತಿರುವ ಬಗ್ಗೆ ಆಕ್ಷೇಪಿಸಿದ ಸಚಿವ, ಕುಂಭಕರ್ಣ ಆರು ತಿಂಗಳು ಮಾತ್ರ ನಿದ್ರೆ ಮಾಡುತ್ತಿದ್ದ. ನೀವು 9 ತಿಂಗಳು ನಿದ್ರೆ ಮಾಡಿದ್ದೀರಿ ಎಂದು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಗರಂ ಆದರು.

ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಜಿಪಂ ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್, ತಾಪಂ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಉಪಾಧ್ಯಕ್ಷೆ ಶಾರದಾ ಶಶಿಧರ್, ಸ್ಥಾಯಿ ಸಮಿತಿ ಅಧ್ಯಕ್ಷೆ ರೇಖಾ ಅನಿಲ್ ಸಭೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net