

ನಾಪೋಕ್ಲು : ಸಮೀಪದ ನೆಲಜಿ ಗ್ರಾಮದ ಇಗ್ಗುತ್ತಪ್ಪ ದೇವಸ್ಥಾನದ ವಾರ್ಷಿಕ ಭಕ್ತ ಸಮಾರಾಧನೆ ಉತ್ಸವ ಮತ್ತು ನೂತನ ಪೌಳಿಯ ಉದ್ಘಾಟನೆ ವಿಜೃಂಭಣೆಯಿಂದ ಸಂಪನ್ನಗೊಂಡಿತು. ಸಮಾರಾಧನೆ ಉತ್ಸವದ ಅಂಗವಾಗಿ ತುಲಾಭಾರ ಸೇವೆ, ವಿವಿಧ ಪೂಜಾ ವಿಧಿ ವಿಧಾನ, ದೇವರ ನೃತ್ಯ ಬಲಿ ಮತ್ತು ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ನೂತನ ಪೌಳಿ ಉದ್ಘಾಟನೆ ನಿಮಿತ್ತ ದೇವಾಲಯದಲ್ಲಿ ಗುರುವಾರ ಬೆಳಗ್ಗೆ ದೇವರಿಗೆ ಅಭಿಷೇಕ, ಬಳಿಕ ಗಣಪತಿ ಹೋಮ ,ರುದ್ರ ಮಹಾಯಾಗ ಸೇರಿದಂತೆ ಹಲವು ಪೂಜಾ ಕೈಂಕರ್ಯಗಳು ವಿಧಿವತ್ತಾಗಿ ನಡೆದವು. ಭಕ್ತರು ಹರಕೆ ಕಾಣಿಕೆಯನ್ನು ಒಪ್ಪಿಸಿ ಧನ್ಯತೆ ಮೆರೆದರು. ಪೌಳಿ ಉದ್ಘಾಟನೆ ನೆರವೇರಿಸಿದ ಶಾಸಕ ಎ.ಎಸ್ ಪೊನ್ನಣ್ಣ ಮಾತನಾಡಿ, ನಾಡಿನ ಭಕ್ತರ ದೇಣಿಗೆಯಿಂದ ಉತ್ತಮ ಪೌಳಿ ನಿರ್ಮಾಣಗೊಂಡಿದೆ. ಸಾರ್ವಜನಿಕರ ಸಹಕಾರದಿಂದ ದೇವಾಲಯ ಮತ್ತಷ್ಟುಅಭಿವೃದ್ದಿ ಹೊಂದಲಿ ಎಂದರು. ದೇವರ ಸನ್ನಿಧಿಗೆ ಒಂದಷ್ಟು ಸೇವೆ ಸಮರ್ಪಿಸಿ, ಉತ್ಸವದಲ್ಲಿ ಭಾಗಿಯಾಗಲು ನನಗೂ ಅವಕಾಶ ನೀಡಿದ ದೇವಾಲಯ ಸಮಿತಿಗೆ ಧನ್ಯವಾದ ಸಮರ್ಪಿಸುವೆ ಎಂದರು.
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಸಿ. ನಾಣಯ್ಯ ಮಾತನಾಡಿ, ದೇವಾಲಯದ ಅಭಿವೃದ್ಧಿಗೆ ಶಾಸಕ ಪೊನ್ನಣ್ಣ ಅನುದಾನ ನೀಡಿದ್ದಾರೆ. ಅವರು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಲು ಈಶ್ವರ ಇಗ್ಗುತ್ತಪ್ಪ ದೇವರು ಇನ್ನಷ್ಟು ಅನುಗ್ರಹಿಸಲಿ ಎಂದರು. ಶಾಸಕ ಪೊನ್ನಣ್ಣ ಅವರನ್ನು ಭಕ್ತ ಜನ ಸಂಘದ ವತಿಯಿಂದ ಗೌರವಿಸಲಾಯಿತು.ರಾಜ್ಯ ಸರ್ಕಾರದ ಚೀಫ್ ಎಲೆಕ್ಟ್ರಿಕಲ್ ಆಫೀಸರ್ ತೀತೀರ ರೋಷನ್ ಅಪ್ಪಚ್ಚು, ನಿವೃತ್ತ ಎಸ್ಪಿ ಚೇಕ್ ಪುವಂಡ ಪುವಯ್ಯ, ಸಿ ಎನ್‌ಸಿ ಸಂಘಟನೆ ಮುಖ್ಯಸ್ಥ ಎನ್. ಯು. ನಾಚಪ್ಪ ಇತರರು ಮಾತನಾಡಿದರು.
ಭಕ್ತ ಜನ ಸಂಘದ ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಉಪಾಧ್ಯಕ್ಷ ಮಂಡೀರ ದೇವಯ್ಯ, ಖಜಾಂಜಿ ಮನವಟ್ಟಿರ ಪಾಪು ಚಂಗಪ್ಪ, ತಕ್ಕ ಮುಖ್ಯಸ್ಥರಾದ ನಾಪನೆರವಂಡ ಪೊನ್ನಪ್ಪ, ಬಾಳೆಯಡ ರಾಜ, ಬದಂಚೆಟ್ಟೀರ ನಾಣಯ್ಯ, ಕೈಯ್ಯಂದಿರ ರಮೇಶ್ ಮತ್ತು ಭಕ್ತಾದಿಗಳು ಪಾಲ್ಗೊಂಡಿದ್ದರು.