ನಂದಿಗಿರಿ ಪ್ರದಕ್ಷಿಣೆ ಹಾಕಿದ ಭಕ್ತರು: ಭೋಗನಂದೀಶ್ವರ ಆಲಯದಿಂದ ಚಾಲನೆ

25CBP3
Published on

ಚಿಕ್ಕಬಳ್ಳಾಪುರ: ಬೆಟ್ಟ-ಗುಡ್ಡಗಳ ನಡುವಿನ ಆಹ್ಲಾದಕರ ವಾತಾವರಣ, ಚುಮುಚುಮು ಚಳಿ, ದೇವರ ನಾಮಸ್ಮರಣೆ ಮಾಡುತ್ತ ಕಾಲ್ನಡಿಗೆಯಲ್ಲಿ ಭಕ್ತರು ನಂದಿಗಿರಿ ಪ್ರದಕ್ಷಿಣೆ ಹಾಕಿದರು.ಆಷಾಢ ಮಾಸದ ಕೊನೆಯ ಸೋಮವಾರ ಗಿರಿ ಪ್ರದಕ್ಷಿಣೆ ನಡೆಯಲಿದ್ದು, ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಾರ್ಯಕ್ರಮ ಸ್ಥಗಿತಗೊಂಡಿತ್ತು. ಆದರೂ ಬೆರಳೆಣಿಕೆಯಲ್ಲಿ ಭಕ್ತರು ನಡೆದು ಖುಷಿಪಟ್ಟಿದ್ದರು. ಈ ಬಾರಿ ಅಗತ್ಯ ಸಿದ್ಧತೆಯೊಂದಿಗೆ ಪ್ರಚಾರ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಜನ ಆಗಮಿಸಿದ್ದರು.

ದೇವಾಲಯದಿಂದ ಅಂಗಟ್ಟ, ಈರೇನಹಳ್ಳಿ, ಕುಡವತಿ, ಕಾರಹಳ್ಳಿ ಕ್ರಾಸ್, ಬೆಟ್ಟದ ಕ್ರಾಸ್, ಹೆಗ್ಗಡಿಹಳ್ಳಿ, ಗಾಣಪುರ, ಕಣಿವೆ ಬಸವಣ್ಣ, ಸುಲ್ತಾನ್ ಪೇಟೆ ಮಾರ್ಗವಾಗಿ ಸುಮಾರು 14 ಕಿ.ಮೀ ನಡೆದುಕೊಂಡು ಮತ್ತೆ ಶ್ರೀ ಭೋಗನಂದೀಶ್ವರ ಸ್ವಾಮಿ ಆಲಯಕ್ಕೆ ಬಂದರು. ಮಹಾಮಂಗಳಾರತಿ ಎತ್ತಿದ ಬಳಿಕ ಕಾರ್ಯಕ್ರಮಕ್ಕೆ ಅಂತ್ಯ ಹಾಡಲಾಯಿತು. ಟ್ರಸ್ಟ್ ವತಿಯಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.

ಭಕ್ತರಿಗೆ ಅಗತ್ಯ ವ್ಯವಸ್ಥೆ: ಪ್ರತಿ ವರ್ಷದಂತೆ ದಾನಿಗಳು, ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಸೇವಾ ಕಾರ್ಯಕ್ರಮಗಳಿಂದ ಕಾಲ್ನಡಿಗೆಯಲ್ಲಿ ಬಂದ ಭಕ್ತರ ಆಯಾಸ ನೀಗಿಸಿದರು. ಅಲ್ಲಲ್ಲಿ ನೀರು, ಬಿಸ್ಕೆಟ್, ಗ್ಲುಕೋಸ್, ಚಾಕೋಲೇಟ್ ವಿತರಿಸಲಾಯಿತು.

ಐತಿಹಾಸಿಕ ಹಿನ್ನೆಲೆ: 1928ರಲ್ಲಿ ದೊಡ್ಡಬಳ್ಳಾಪುರದ ಸುಬ್ಬರಾಯಪ್ಪ, ಗೌರಿಬಿದನೂರು ತಾಲೂಕು ನಾಮಗೊಂಡ್ಲು ಚಿಕ್ಕಣ್ಣ ಎಂಬುವರಿಂದ ಪ್ರಾರಂಭವಾದ ಕಾರ್ಯಕ್ರಮಕ್ಕೆ ಹಲವು ದಶಕಗಳ ಇತಿಹಾಸವಿದೆ. ಶಿವನಿಗೆ ಪ್ರಿಯವಾದ ಆಷಾಢ ಮಾಸದಲ್ಲಿ ನಂದಿಗಿರಿ ಪ್ರದಕ್ಷಿಣೆ ಮಾಡಿದರೆ ಕೈಲಾಸ ಪರ್ವತ ಸುತ್ತಿದಷ್ಟೇ ಪುಣ್ಯ ಲಭಿಸುತ್ತದೆ ಎನ್ನುವುದು ಭಕ್ತರ ನಂಬಿಕೆ.

ನಂದಿ ಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸುವುದು ಖುಷಿಯ ವಿಚಾರ. ಕುಟುಂಬ, ಸ್ನೇಹಿತರ ಬಳಗದೊಂದಿಗೆ ನಡೆದುಕೊಂಡು ಹೋಗುವುದರಿಂದ ವಿಶೇಷ ಅನುಭವ.ರಾಮಚಂದ್ರಪ್ಪ, ನಿವೃತ್ತ ಸರ್ಕಾರಿ ನೌಕರ, ಚಿಕ್ಕಬಳ್ಳಾಪುರ

ಆಧ್ಯಾತ್ಮಿಕತೆಯ ಭಾವನೆಯಲ್ಲಿ ಬೆಟ್ಟ-ಗುಡ್ಡಗಳ ನಡುವೆ ಕಾಲ್ನಡಿಗೆಯಲ್ಲಿ ಸಾಗುವ ಗಿರಿ ಪ್ರದಕ್ಷಿಣೆಯು ದೈಹಿಕ ಕಸರತ್ತಿನ ಜತೆಗೆ ಮನಸ್ಸಿಗೂ ಖುಷಿ ನೀಡುತ್ತದೆ.ಶಿವಕುಮಾರ್, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net