

ಸರ್ಕಾರದ ಆದೇಶದಂತೆ ಉಭಯ ಜಿಲ್ಲೆಗಳ ಬಹುತೇಕ ದೇವಸ್ಥಾನಗಳು ಸೋಮವಾರ ತೆರೆಯಲಿವೆ. ಮಾರ್ಗಸೂಚಿಯಂತೆ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸರ್ ಬಳಕೆ ಸಹಿತ ಇತರ ಸೂಚನೆಗಳನ್ನು ಪಾಲಿಸಲು ಸಿದ್ಧತೆ ನಡೆದಿದೆ. ಕೆಲವೇ ಕೆಲವು ಕ್ಷೇತ್ರಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಕ್ತರ ಭೇಟಿಯನ್ನು ಮುಂದೂಡಲಾಗಿದೆ.
ಸದ್ಯಕ್ಕಿಲ್ಲ ಮಸೀದಿ ಆರಂಭ ಉಳ್ಳಾಲ/ಉಡುಪಿ: ಜೂನ್ 8ರಂದು ಮಸೀದಿಗಳನ್ನು ಆರಂಭಿಸುವುದಿಲ್ಲ. ಸರ್ಕಾರ ಮಸೀದಿಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪ್ರಕಟಿಸಿದ ನಂತರ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಯಾಸೀನ್ ಮಲ್ಪೆ ಸಮುದಾಯದ ಪ್ರತಿನಿಧಿಗಳ ಸಮಾಲೋಚನಾ ಸಭೆಯಲ್ಲಿ ತಿಳಿಸಿದ್ದಾರೆ. ಉಳ್ಳಾಲ ದರ್ಗಾ ಅಧೀನದಲ್ಲಿರುವ ಮಸೀದಿ ತೆರೆಯುವ ಕುರಿತು ಚರ್ಚಿಸಲು ಭಾನುವಾರ ಸಾಯಂಕಾಲ ದರ್ಗಾದಲ್ಲಿ ಸಭೆ ಕರೆಯಲಾಗಿದೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ತಿಳಿಸಿದ್ದಾರೆ. ಮಸೀದಿ ತೆರೆದರೆ ಜನರ ನಿಯಂತ್ರಣ ಜಮಾತ್ ಸಮಿತಿಗಳಿಗೆ ಸವಾಲಾಗಲಿದೆ. ಕೃಷ್ಣಾಪುರದ 6 ಮಸೀದಿ ಜೂನ್ ಅಂತ್ಯದವರೆಗೆ ತೆರೆಯುವುದಿಲ್ಲ. ಮುಸ್ಲಿಮರು ಆದಷ್ಟೂ ಮನೆಯಲ್ಲೇ ನಮಾಜ್ ನಿರ್ವಹಿಸುವಂತೆ ಖಾಜಿಗಳು ಮನವಿ ಮಾಡಿದ್ದಾರೆ.
ನಾಳೆ ಕಟೀಲು ದೇಗುಲ ತೆರೆಯಲ್ಲ
ಕಟೀಲು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಸದ್ಯಕ್ಕೆ ತೆರೆಯದಿರಲು ನಿರ್ಧರಿಸಲಾಗಿದೆ.
ಸೋಮವಾರ ದೇವಸ್ಥಾನ ತೆರೆಯಲು ಸಿದ್ಧತೆ ನಡೆದಿತ್ತು. ಆದರೆ ಶುಕ್ರವಾರ ಐದು ಸಾವಿರದಷ್ಟು ಭಕ್ತರು ದೇವಳಕ್ಕೆಂದು ಆಗಮಿಸಿದ್ದು, ದರ್ಶನಕ್ಕೆ ಅವಕಾಶ ನೀಡದ ಕಾರಣ ಗೋಪುರದಿಂದಲೇ ವಾಪಸ್ ಹೋಗಿದ್ದಾರೆ. ದೇವಸ್ಥಾನ ತೆರೆದಲ್ಲಿ ಭಾರಿ ಸಂಖ್ಯೆಯಲ್ಲಿ ಭಕ್ತರು ಬರಲಿದ್ದು, ನಿಯಂತ್ರಣ ಕಷ್ಟ ಎಂದು ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ.
ಆನ್‌ಲೈನ್ ಟಿಕೆಟ್: ನಿಯಮಿತ ಜನರನ್ನಷ್ಟೇ ದರ್ಶನಕ್ಕೆ ಕರೆಸಿಕೊಳ್ಳಲು ತಿರುಪತಿ ದೇವಸ್ಥಾನದಲ್ಲಿರುವಂತೆ ಆನ್‌ಲೈನ್ ದರ್ಶನ ಟಿಕೆಟ್ ಸೇವೆಯನ್ನು ಕಟೀಲಿನಲ್ಲಿ ಉಚಿತವಾಗಿ ಭಕ್ತರು ಪಡೆದುಕೊಳ್ಳುವ ವ್ಯವಸ್ಥೆಗಾಗಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗುತ್ತಿದೆ. ನಂತರ ಹಂತ ಹಂತವಾಗಿ ದೇವಳವನ್ನು ತೆರೆಯುವುದು ಉತ್ತಮ ಎಂದು ಆಡಳಿತ ಮಂಡಳಿ ತಿಳಿಸಿದೆ.
ಕೃಷ್ಣ ಮಠಕ್ಕೆ ಇನ್ನೊಂದು ತಿಂಗಳು ಪ್ರವೇಶವಿಲ್ಲ
ಉಡುಪಿ: ಕೃಷ್ಣ ಮಠದಲ್ಲಿ ದೇವರ ದರ್ಶನಕ್ಕೆ ಜುಲೈವರೆಗೆ ಕಾಯಬೇಕಿದೆ. ‘ಕರೊನಾ ಹಿನ್ನೆಲೆಯಲ್ಲಿ ಇನ್ನೂ 20ರಿಂದ 30 ದಿನ ಕಾಯುತ್ತೇವೆ. ಮುಂದಿನ ಬೆಳವಣಿಗೆಗಳನ್ನು ನೋಡಿ ದರ್ಶನ ವ್ಯವಸ್ಥೆ ಮಾಡುತ್ತೇವೆ’ ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರೀಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಕೃಷ್ಣ ಮಠಕ್ಕೆ ಪ್ರತಿದಿನ 1 ಲಕ್ಷ ರೂ. ಖರ್ಚು ಇದೆ. ಲಾಕ್‌ಡೌನ್ ಸಂದರ್ಭದಲ್ಲೂ 150ಕ್ಕೂ ಅಧಿಕ ಸಿಬ್ಬಂದಿಗೆ ಸಂಬಳ ಕೊಟ್ಟಿದ್ದೇವೆ. 200ಕ್ಕೂ ಅಧಿಕ ಮಂದಿ ಆರೋಗ್ಯ ಇಲಾಖೆ ಸಿಬ್ಬಂದಿಗೆ ಭೋಜನ ವ್ಯವಸ್ಥೆ ಮಾಡಲಾಗಿದೆ ಎಂದು ಸ್ವಾಮೀಜಿ ಹೇಳಿದರು.
ಮಂಗಳೂರು ಚರ್ಚುಗಳಲ್ಲಿ 13ರಿಂದ ಪ್ರಾರ್ಥನೆ
ಮಂಗಳೂರು/ಉಡುಪಿ: ಮಂಗಳೂರು ಧರ್ಮಪ್ರಾಂತ್ಯ ವ್ಯಾಪ್ತಿಯ ಇಗರ್ಜಿಗಳಲ್ಲಿ ಜೂ.13ರಿಂದ ಸರ್ಕಾರದ ನಿಯಮಗಳನ್ನು ಪಾಲಿಸಿ ಪ್ರಾರ್ಥನೆ ಆರಂಭಿಸಲಾಗುವುದು ಎಂದು ಬಿಷಪ್ ಡಾ.ಪೀಟರ್ ಪಾವ್ಲೃ್ ಸಾಲ್ದಾನ್ಹಾ ತಿಳಿಸಿದ್ದಾರೆ.
ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಥರ್ಮಲ್ ಸ್ಕಾೃನಿಂಗ್, ಸ್ಯಾನಿಟೈಸರ್, ಸ್ವಯಂಸೇವಕರು, ಆಸನ ವ್ಯವಸ್ಥೆ ಇತ್ಯಾದಿ ತಯಾರಿ ಸಹಿತ ಸೂಚನೆಗಳನ್ನು ಆಯಾ ಚರ್ಚ್‌ಗಳ ಧರ್ಮಗುರುಗಳಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಉಡುಪಿ ನಾಳೆ ನಿರ್ಣಯ: ಉಡುಪಿ ಜಿಲ್ಲೆಯ ಚರ್ಚ್‌ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಬಗ್ಗೆ ಸೋಮವಾರ ಧರ್ಮಾಧ್ಯಕ್ಷರ ನೇತೃತ್ವದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಕ್ರೈಸ್ತ ಧರ್ಮಪ್ರಾಂತ್ಯದ ಪಿಆರ್‌ಒ ಫಾ. ಚೇತನ್ ತಿಳಿಸಿದ್ದಾರೆ.
ಉಡುಪಿ ಎಡಿಸಿ ಸೂಚನೆ
ಉಡುಪಿ: ಜಿಲ್ಲೆಯ ದೇವಸ್ಥಾನಗಳಲ್ಲಿ ಭಕ್ತರು ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವಂತೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ. ಮಾಸ್ಕ್, ಸ್ಯಾನಿಟೈಸರ್, ಥರ್ಮಲ್ ಸ್ಕಾೃನಿಂಗ್, 6 ಅಡಿ ಅಂತರ ಕಡ್ಡಾಯ. ಸೋಪ್‌ನಲ್ಲಿ ಕೈತೊಳೆದು ಒಳಗೆ ಪ್ರವೇಶಿಸಬೇಕು. ಆರೋಗ್ಯವಂತರಿಗೆ ಮಾತ್ರ ಪ್ರವೇಶ. ದೇವರ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಸೇವೆ ಇರುವುದಿಲ್ಲ. ಪೂಜಾ ಸಾಮಗ್ರಿ ತರುವಂತಿಲ್ಲ. 65 ವಷರ್ ಮೇಲ್ಪಟ್ಟವರು, 10 ವಷರ್ದ ಕೆಳಗಿನ ಮಕ್ಕಳು, ಗರ್ಭಿಣಿಯರಿಗೆ ಪ್ರವೇಶವಿಲ್ಲ. ಪಾದರಕ್ಷೆಯನ್ನು ವಾಹನದಲ್ಲೇ ಬಿಟ್ಟು ಬರಬೇಕು ಎಂದು ಸೂಚಿಸಿದ್ದಾರೆ.