

ಹುಬ್ಬಳ್ಳಿ: ಇಲ್ಲಿಯ ದೇಶಪಾಂಡೆನಗರದ ಗುಜರಾತ ಭವನದಲ್ಲಿ ಧಾರವಾಡ ಜಿಲ್ಲೆಯ ಮಂದಿರ ವಿಶ್ವಸ್ಥರ ಪೂರ್ವಭಾವಿ ಸಭೆ ಶುಕ್ರವಾರ ಏರ್ಪಡಿಸಲಾಗಿತ್ತು.
ಹಿಂದು ಜನಜಾಗೃತಿ ಸಮಿತಿಯ ಗುರುಪ್ರಸಾದ ಗೌಡ ಮಾತನಾಡಿ, ಹುಬ್ಬಳ್ಳಿಯಲ್ಲಿ ಜ. 28ರಂದು ಏರ್ಪಡಿಸಲಾಗಿರುವ ಮಂದಿರ ಅಧಿವೇಶನದ ಪ್ರಸ್ತಾವನೆಯನ್ನು ಮಂಡಿಸಿದರು. ದೇಶದ ಪ್ರಮುಖ ದೇವಸ್ಥಾನಗಳಲ್ಲಿ ನಡೆದ ಅವ್ಯಹಾರಗಳ ಬಗ್ಗೆ ಸಮಿತಿ ನಡೆಸುತ್ತಿರುವ ಹೋರಾಟ ಕುರಿತು ವಿವರಿಸಿದರು.
ಗಾಯತ್ರಿ ತಪೋಭೂಮಿ ದೇವಸ್ಥಾನದ ವಿನಾಯಕ ಆಕಳವಾಡಿ ಮಾತನಾಡಿ, ದೇವಸ್ಥಾನದ ಹಣವನ್ನು ಯೋಗ್ಯ ರೀತಿಯಲ್ಲಿ ಮತ್ತು ಪಾರದರ್ಶಕವಾಗಿ ವಿನಿಯೋಗ ಮಾಡಿದರೆ ಆದರ್ಶ ದೇವಸ್ಥಾನ ಹೇಗೆ ಇರುತ್ತದೆ ಎಂಬುದನ್ನು ಉದಾಹರಣೆ ಸಮೇತ ವಿವರಿಸಿದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಭಕ್ತರಿಗೆ ಗೊತ್ತಿಲ್ಲದ ಹಾಗೆ ದೇವಸ್ಥಾನ ಅತಿಕ್ರಮಣ ಮಾಡಲಾಗುತ್ತಿದೆ. ಹಿಂದುಗಳಿಗೆ ಇದು ಎಚ್ಚರಿಕೆಯ ಘಂಟೆ, ಈಗಲೇ ಜಾಗೃತರಾಗದಿದ್ದರೆ ದೇವಸ್ಥಾನಗಳು ಭಕ್ತರ ಕೈಯಲ್ಲಿ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.
ಪಾಂಡುರಂಗ ಪಮ್ಮಾರ, ಸುಮಾರು 60ಕ್ಕಿಂತ ಹೆಚ್ಚು ಮಂದಿರದ ವಿಶ್ವಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.
ಕರ್ನಾಟಕ ದೇವಸ್ಥಾನ ಮಠ ಮತ್ತು ಧಾಮಿರ್ಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಬೆಂಗಳೂರಿನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ದೇವಸ್ಥಾನಗಳ ಅಧಿವೇಶನದಿಂದ ಸರ್ಕಾರ ಎಚ್ಚೆತ್ತುಕೊಂಡಿದೆ. ಎಲ್ಲರೂ ಸೇರಿ ಹುಬ್ಬಳ್ಳಿಯ ಜಿಲ್ಲಾ ಮಂದಿರ ಅಧಿವೇಶನ ಯಶಸ್ವಿಗೊಳಿಸೋಣ ಎಂದು ಪದಾಧಿಕಾರಿಗಳು ಅಭಿಪ್ರಾಯ ಮಂಡಿಸಿದರು.
ಮಂದಿರ ಅಧಿವೇಶನದ ರೂಪುರೇಷೆ ತಿಳಿಸಲಾಯಿತು. ದೇವಸ್ಥಾನಗಳ ರಕ್ಷಣೆಗಾಗಿ ಎಲ್ಲರೂ ಯೋಗದಾನ ನೀಡಲು ನಿರ್ಧರಿಸಿದರು.