ದೇವಳ ಆವರಣದ ಮನೆ ತೆರವು

PTR_8 MAR_5
Published on

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸೇರಿದ ಜಾಗದ ಮನೆ ತೆರವು ಕಾರ್ಯ ಮುಂದುವರಿದ್ದು, ಶನಿವಾರ ಬಪ್ಪಳಿಗೆಯ ಉಳ್ಳಾಲ್ತಿ ನಡೆಯಲ್ಲಿದ್ದ ಕ್ರೈಸ್ತ ಸಮುದಾಯಕ್ಕೆ ಸೇರಿದ ಜೆರಮ್ ಸೆರಾವೊ ಅವರ ಒಪ್ಪಿಗೆಯ ಮೇರೆಗೆ ಮನೆಯನ್ನು ತೆರವು ಮಾಡಲಾಗಿದೆ.

ಜೆರಮ್ ಸೆರಾವೋ ಮಾತನಾಡಿ, ೧೬ ವರ್ಷದ ಹಿಂದೆ ಒಪ್ಪಂದದ ಮೂಲಕ ೭ ಸೆಂಟ್ಸ್ ಜಾಗವನ್ನು ಪಡೆದುಕೊಳ್ಳಲಾಗಿತ್ತು. ಮನೆ ಮಾತ್ರ ನಮ್ಮ ಹೆಸರಿನಲ್ಲಿದ್ದು, ಜಾಗ ದೇವಸ್ಥಾನದ ಹೆಸರಿನಲ್ಲಿದೆ. ದೇವಸ್ಥಾನಕ್ಕೆ ವಾರ್ಷಿಕವಾಗಿ ೧,೧೦೦ರೂ. ಬಾಡಿಗೆ ಪಾವತಿಸಿಕೊಂಡು ಬರುತ್ತಿದ್ದೇವೆ. ಪರ್ಲಡ್ಕದಲ್ಲಿ ಮನೆಯಿದ್ದು, ಐದು ತಿಂಗಳಿಂದ ಈ ಮನೆಯನ್ನು ಬಾಡಿಗೆಗೆ ನೀಡಿದ್ದೆವು. ಈಗ ದೇವಸ್ಥಾನ ಅಭಿವೃದ್ಧಿ ಕಾರ್ಯಕ್ಕಾಗಿ ಜಾಗವನ್ನು ಬಿಟ್ಟುಕೊಡುತ್ತಿದ್ದೇವೆ ಎಂದರು.

ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ದೇವಸ್ಥಾನದ ಜಾಗವನ್ನು ಸರ್ವೇ ಮಾಡಲಾಗುತ್ತಿದೆ. ಜಾಗ ಸಂತೋಷದಿಂದ ಬಿಟ್ಟುಕೊಡಲು ಒಪ್ಪಿದ್ದಾರೆ. ಮನೆಯ ಹೆಂಚುಗಳನ್ನು ಅವರಿಗೆ ಬೇಕಾದ ಸ್ಥಳಕ್ಕೆ ತಲುಪಿಸುತ್ತಿದ್ದೇವೆ. ದೇವಸ್ಥಾನದ ಜಾಗವನ್ನು ದೇವರಿಗೆ ಅರ್ಪಣೆ ಮಾಡಬೇಕಾಗಿ ವಿನಂತಿಸಿದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಕುಮಾರ್ ಸುವರ್ಣ, ಈಶ್ವರ ನಾಯ್ಕ, ಕಾರ್ಯನಿರ್ವಣಾಽಕಾರಿ ಕೆ. ವಿ. ಶ್ರೀನಿವಾಸ್, ಅಳಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ, ಕಾಂಗ್ರೆಸ್ ಮುಖಂಡರಾದ ರಂಜಿತ್ ಬಂಗೇರ, ಸನತ್ ರೈ, ನಿಹಾಲ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net