

ಹೊಳೆನರಸೀಪುರ: ತಾಲೂಕಿನ ಅಣ್ಣೇಚಾಕನಹಳ್ಳಿ ಗ್ರಾಮದಲ್ಲಿ ಪುನರುತ್ಥಾನಗೊಂಡಿರುವ ಗ್ರಾಮದೇವತೆ ಹೊನ್ನಾಳಮ್ಮ ದೇಗುಲ ಡಿ. 15ರಂದು ಉದ್ಘಾಟನೆಯಾಗಲಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. 14ರ ಸಂಜೆ ಗೋಧೂಳಿ ಲಗ್ನದಲ್ಲಿ ಗೋ ಪೂಜೆ, ಗಂಗಾ ಪೂಜೆ, ತೀರ್ಥ ಸಂಗ್ರಹಣೆ, ದೀಪಾರಾಧನೆ, ಮಹಾ ಸಂಕಲ್ಪ, ಅಂಕುರಾರ್ಪಣ, ವಾಸ್ತು ಕಳಸ ಪ್ರತಿಷ್ಠಾಪನೆ, ವಾಸ್ತು ಹೋಮ, ಪ್ರಾಣ ಪ್ರತಿಷ್ಠಾಪನೆ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ಜರುಗಲಿದೆ. ಡಿ.15ರ ಬೆಳಗ್ಗೆ ಗ್ರಾಮದ ರಾಜಬೀದಿಗಳಲ್ಲಿ ಮೆರವಣಿಗೆ, ಗೋಪುರ ಕಳಸ ಪ್ರತಿಷ್ಠಾಪನೆ, ಪಂಚಾಮೃತ ಅಭಿಷೇಕ, ದುರ್ಗಾಹೋಮ, ಪೂರ್ಣಾಹುತಿ, ಕುಂಭಾಭಿಷೇಕ, ವಿಶೇಷ ಅಲಂಕಾರ, ಅಷ್ಟೋತ್ತರ ಅರ್ಚನೆ, ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದ ಸ್ವಾಮೀಜಿ, ಕೆ.ಆರ್. ನಗರ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ ಸಾನಿಧ್ಯದಲ್ಲಿ ಧಾರ್ಮಿಕ ಸಮಾರಂಭ ನಡೆಯಲಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್. ಪುಟ್ಟಸ್ವಾಮಿ ತಿಳಿಸಿದ್ದಾರೆ