

ಮಂಗಳೂರು: ದೇವಸ್ಥಾನಗಳ ಆಡಳಿತವನ್ನು ಸರ್ಕಾರ ಹಿಂದು ಸಮಾಜಕ್ಕೆ ಬಿಟ್ಟುಕೊಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ ಆಗ್ರಹಿಸಿದ್ದಾರೆ.
ದೇವಾಲಯ ಸಂವರ್ಧನಾ ಸಮಿತಿ ಕರ್ನಾಟಕ ವತಿಯಿಂದ ಭಾನುವಾರ ಸಂಘನಿಕೇತನದಲ್ಲಿ ಆಯೋಜಿಸಿದ್ದ ಮಂಗಳೂರು ಮಹಾನಗರ ಮತ್ತು ಗ್ರಾಮಾಂತರ ಭಾಗದ ದೇವಾಲಯ ಆಡಳಿತ ಮಂಡಳಿಯ ‘ಚಿಂತನಾ ಸಭೆ’ಯಲ್ಲಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ, ಉಡುಪಿ ವಿಭಾಗದ ದೇವಾಲಯಗಳಲ್ಲಿ ಉತ್ತಮ ರೀತಿಯ ಸಮಾಜಮುಖಿ ಕಾರ್ಯಚಟುವಟಿಕೆಗಳು ನಡೆಯುತ್ತಿವೆ. ಇದು ಇನ್ನಷ್ಟು ಸಮಗ್ರವಾಗುವಂತಾಗಬೇಕು. ದೇವಾಲಯವೊಂದರಲ್ಲಿ ಆಗುವ ಪರಿವರ್ತನೆ ಪ್ರದೇಶದ ಪ್ರತಿಯೊಂದು ಹಿಂದೂ ಮನೆಯನ್ನೂ ಕೂಡ ಸರ್ವಾಂಗೀಣ ನೆಲೆಯಲ್ಲಿ ಸಶಕ್ತಗೊಳಿಸಬೇಕು. ಧಾರ್ಮಿಕ ಜಾಗೃತಿಯ ಜೊತೆಗೆ ದೇವಸ್ಥಾನ ಶಿಕ್ಷಣ ಕೇಂದ್ರವಾಗಿ , ಸಾಂಸ್ಕೃತಿಕ ಮತ್ತು ಸೇವಾ ಚಟುವಟಿಕೆಗಳ ನೆಲೆಯಾಗಿ, ಹಿಂದುತ್ವ ನಿಷ್ಠವಾಗಿ ಬೆಳೆಯುವಂತಾಗಬೇಕು ಎಂದು ಅವರು ಆಶಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ದಾ.ಮ.ರವೀಂದ್ರ, ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್, ಮಂಗಳೂರು ಜಿಲ್ಲಾ ಸಂಯೋಜಕ್ ಗಣೇಶ್, ಸದಸ್ಯ ರವಿರಾಜ್ ಕೋಡಿಕಲ್ ಮುಂತಾದವರು ಉಪಸ್ಥಿತರಿದ್ದರು.